-->
ಎರಡನೇ ನಾಗವರ್ಮ
 
ಸ್ವ-ವಿವರ
 
ಕಾವ್ಯನಾಮ :  
ನಿಜನಾಮ/ಪೂರ್ಣನಾಮ :  
ಜನನ/ಕಾಲ :
ಕ್ರಿ.ಶ. ೧೨೦೯ರ ವೇಳೆಯಲ್ಲಿ ಕೃತಿ ರಚನೆ ಮಾಡಿದ ಜನ್ನ ಈ ನಾಗವರ್ಮನನ್ನು ಹೊಗಳಿದ್ದಾನೆ.
ಇವನು ಕ್ರಿ.ಶ. ೧೧೩೮ ರಿಂದ ಕ್ರಿ.ಶ. ೧೧೫೦ರವರಗೆ ರಾಜ್ಯವಾಳಿದ ಜಗದೇಕಮಲ್ಲನ ಕಟಕೋಪಾಧ್ಯಾಯನಾಗಿದ್ದನಂತೆ.
ಆದ್ದರಿಂದ ಕ್ರಿ.ಶ. ೧೧೩೮ ರಿಂದ ಕ್ರಿ.ಶ. ೧೨೦೯ರ ನಡುವೆ ಈತನು ಗ್ರಂಥ ರಚನೆ ಮಾಡಿರಬೇಕೆಂಬುದು ಖಚಿತ.
 
ವೃತ್ತಿ:
ಇವನು ಜನ್ನನಿಗೆ ಉಪಾಧ್ಯಾಯನೂ ಆಗಿದ್ದನು. ಬಹುಶಃ ನಾಗವರ್ಮನ ವಾರ್ಧಕ್ಯದಲ್ಲಿ ಜನ್ನನು ಇವನ ಶಿಷ್ಯನಾಗಿದ್ದಿರಬಹುದು.
 
ಸಾಹಿತ್ಯಕೃತಿಗಳು :
ಈ ಜೈನಕವಿ `ಕಾವ್ಯಾವಲೋಕನ', ಭಾಷಾಭೂಷಣ, `ವಸ್ತುಕೋಶ' ಎಂಬ ಲಕ್ಷಣ ಗ್ರಂಥಗಳನ್ನು ರಚಿಸಿದ್ದಾನೆ.

`ಭಾಷಾಭೂಷಣ'ದಲ್ಲಿ ನಯಸೇನ, ಗುಣವರ್ಮರ ಹೆಸರುಗಳನ್ನು ಸೂಚಿಸಿದ್ದಾನೆ. `ಕಾವ್ಯಾವಲೋಕನ'ದಲ್ಲಿ ತನಗಿಂತ ಹಿಂದಿನ ಅನೇಕ ಕನ್ನಡ ಕವಿಗಳ ಪದ್ಯಗಳನ್ನು ಉದ್ದರಿಸಿದ್ದಾನೆ.

ಈತನ `ಭಾಷಾಭೂಷಣ' ಕನ್ನಡ ವ್ಯಾಕರಣ. ಆದರೆ ನಾಗವರ್ಮನು ಇದನ್ನು ಸಂಸ್ಕೃತದಲ್ಲಿ ಬರೆದಿದ್ದಾನೆ. ಪ್ರಾಚೀನವಾದ ವಾಡಿಕೆಯಂತೆ ಇದರಲ್ಲಿ ಸೂತ್ರಗಳೂ ವೃತ್ತಿಗಳೂ ಇವೆ. ಸೂತ್ರವೂ ಸಂಸ್ಕೃತದಲ್ಲಿದೆ. ವೃತ್ತಿಯೂ ಸಂಸ್ಕೃತದಲ್ಲಿದೆ. ಉದಾಹರಣೆಗಳು ಮಾತ್ರ ಕನ್ನಡ.

ಕರ್ನಾಟ ಶಬ್ಧ ಸೂರಾಣಿ ಲೋಕವ್ಯುತ್ಪತ್ತಿ ಹೇತವೇ |
ರಚಿತಾನಿ ಸ್ಫಟಾರ್ಥಾನಿ ಕೃತಿನಾ ನಾಗವರ್ಮಣಾ ||

ಎಂದು ಗ್ರಂಥದ ಕೊನೆಯಲ್ಲಿ ಕವಿ ಹೇಳಿಕೊಂಡಿದ್ದಾನೆ. ಈ ಗ್ರಂಥದಲ್ಲಿ ಒಟ್ಟು ೨೮೦ ಸೂತ್ರಗಳಿವೆ. ಕೆಲವು ಸೂತ್ರಗಳಿಗೆ ನಾಗವರ್ಮ ಕನ್ನಡ ಟೀಕೆಯನ್ನೂ ಬರೆದಿದ್ದಾನೆ. (ಸೂತ್ರಗಳು ೩೨, ೩೩, ೩೭ ಮತ್ತು ೩೯) ಈ ವ್ಯಾಕರಣವೇ ಕನ್ನಡದ ಮೊತ್ತಮೊದಲ ವ್ಯಾಕರಣ. ಈತನು ಸಂಗ್ರಹವಾಗಿ ಹೇಳಿರುವುದನ್ನೇ ಕೇಶಿರಾಜನು ತನ್ನ `ಶಬ್ಧಮಣಿ ದರ್ಪಣ'ದಲ್ಲಿ ವಿಸ್ತಾರವಾಗಿ ಹೇಳಿ ಹಲವು ದೃಷ್ಟಾಂತಗಳನ್ನು ಕೊಟ್ಟಿದ್ದಾನೆ. ಮುಂದೆ ೧೭ನೇ ಶತಮಾನದ ಬಟ್ಟಾಕಳಂಕನು `ಭಾಷಾಭೂಷಣ'ದ ಮಾದರಿಯನ್ನೇ ಮನಸ್ಸಿನಲ್ಲಿಟ್ಟುಕೊಂಡು ತನ್ನ ಕನ್ನಡ ವ್ಯಾಕರಣವನ್ನು ಸಂಸ್ಕೃತ ಭಾಷೆಯಲ್ಲಿ ಸೂತ್ರ, ವೃತ್ತಿಗಳ ರೂಪವಾಗಿ ಹೇಳಿದ್ದಾನೆ. `ಭಾಷಾಭೂಷಣ'ದಲ್ಲಿ ಸಂಜ್ಞಾ, ಸಂಧಿ, ವಿಭಕ್ತಿ, ಕಾರಕ, ಶಬ್ಧರೀತಿ, ಸಮಾಸ, ತದ್ಧಿತ, ಅಖ್ಯಾತ, ಅವ್ಯಯ, ನಿಪಾತ ಎಂಬ ಹತ್ತು ಅಧ್ಯಾಯಗಳಿವೆ.

ಕಾವ್ಯಾವಲೋಕನ : ಐದು ಅಧಿಕಾರಗಳುಳ್ಳ ವ್ಯಾಕರಣಾಲಂಕಾರ ಶಾಸ್ತ್ರಗಳನ್ನೊಳಗೊಂಡ ಗ್ರಂಥ. `ಶಬ್ಧಸ್ಮೃತಿ' ಎಂಬ ಮೊದಲನೆಯ ಅಧಿಕಾರ ಕನ್ನಡ ವ್ಯಾಕರಣ. `ಭಾಷಾಭೂಷಣ'ದಲ್ಲಿರುವಷ್ಟು ವಿಸ್ತಾರವಲ್ಲದಿದ್ದರೂ ಇಲ್ಲಿ ಕನ್ನಡ ವ್ಯಾಕರಣ ನಿಯಮಗಳನ್ನು ಸಂಗ್ರಹವಾಗಿ ಹೇಳಿದೆ.

ಉಳಿದ ನಾಲ್ಕು ಅಧಿಕಾರಗಳು : ಕಾವ್ಯಾಮಲವ್ಯಾವೃತ್ತಿ, ಗುಣವಿವೇಕ, ರೀತಿಕ್ರಮ, ರಸನಿರೂಪಣೆ, ಕವಿಸಮಯಾಧಿಕರಣ. ಇದು ಕವಿಗಳಿಗೆ ನಾಗವರ್ಮನು ನೀಡಿದ ಒಂದು ಕೈಗನ್ನಡಿ ಎಂದರೆ ತಪ್ಪಲ್ಲ. ಆ ಮಾತನ್ನು ನಾಗವರ್ಮನೇ ಹೇಳಿಕೊಂಡಿದ್ದಾನೆ. ನೃಪತುಂಗನ `ಕವಿರಾಜಮಾರ್ಗ' ದಲ್ಲಿ ಇಲ್ಲದ ರಸಪ್ರಕರಣವು `ಕಾವ್ಯಾವಲೋಕ'ದಲ್ಲಿ ಬಂದಿದೆ. `ರಸರತ್ನಾಕರ'ವನ್ನು ಬರೆದ ಸಾಳ್ವನು ನಾಗವರ್ಮನ ಕೃತಿಯ ಆ ಅಧ್ಯಾಯವನ್ನು ಅನುಸರಿಸಿ ತನ್ನ ಕೃತಿಯನ್ನು ಬರೆದುದಾಗಿ ಹೇಳಿಕೊಂಡಿದ್ದಾನೆ. `ಸತ್ಕವಿಪರಂಪರೆಯಿಂಪರಿಗೀತಮಾದ' ಕಾವ್ಯಸಂಕೇತಗಳನ್ನೂ ಕ್ರಮವಾಗಿ ಉದಾಹರಣೆಗಳೊಡನೆ ವಿವರಿಸಿದ್ದಾನೆ.

ವಸ್ತು ಕೋಶ: ಇದು ಒಂದು ಸಂಸ್ಕೃತ ಕನ್ನಡ ನಿಘಂಟು. ಕನ್ನಡ ಕವಿಗಳು ಬಳಸುವ ಸಂಸ್ಕೃತ ಶಬ್ದಗಳಿಗೆ ಅರ್ಥ ಹೇಳುವುದೇ ಇಲ್ಲಿ ಕವಿಯ ಉದ್ದೇಶ. ಈ ನಿಘಂಟು ಕೂಡ ಕಂದವೃತ್ತಗಳಲ್ಲಿಯೇ ರಚಿತವಾಗಿದೆ. ಯಾವ ಶಾಸ್ತ್ರವನ್ನಾದರೂ ಪದ್ಯದಲ್ಲಿಯೇ ಹೇಳುತ್ತಿದ್ದ ಆ ಕಾಲದವರು ನಿಘಂಟಿಗೆ ಮಾತ್ರ ಗದ್ಯವನ್ನೇಕೆ ಬಳಸುತ್ತಾರೆ?. ಬಹುಶಃ ಶಾಸ್ತ್ರವನ್ನು ಕಂಠಪಾಠ ಮಾಡುವುದಕ್ಕೂ ನೆನಪಿಟ್ಟುಕೊಳ್ಳುವುದಕ್ಕೂ ಗದ್ಯಕ್ಕಿಂತ ಪದ್ಯವೇ ಅನುಕೂಲವೆಂಬ ಯೋಚನೆಯೇ ಇದಕ್ಕೆ ಕಾರಣವಿರಬಹುದು. ಅಮರಸಿಂಹನ `ನಾಮಲಿಂಗಾನುಶಾಸನ'ವೂ ಶ್ಲೋಕರೂಪವಾಗಿಯೇ ಇದೆಯಲ್ಲವೇ?

ನಾಗವರ್ಮನು ಕಾವ್ಯವ್ಯಾಸಂಗಕ್ಕೆ ಉಪಯುಕ್ತವಾದ ವ್ಯಾಕರಣ ಅಲಂಕಾರ, ನಿಘಂಟುಗಳನ್ನು ಬರೆದ ಶಾಸ್ತ್ರಕಾರನೇ ಆದರೂ ಇವನು ಕನ್ನಡ ಕಾವ್ಯಗಳಿಂದ ಉದಾಹರಣೆಗಳಾಗಿ ಆಯ್ದುಕೊಂಡಿರುವ ಪದ್ಯಗಳನ್ನು ಗಮನಿಸುವಾಗ ಇವನ ಅಭಿರುಚಿ, ರಸಜ್ಞತೆಗಳು ಸುವೇದ್ಯವಾಗುತ್ತವೆ. ಆ ಪದ್ಯಗಳ ನಾದಮಾಧುರ್ಯ ಮತ್ತು ಅರ್ಥಚಮತ್ಕಾರ, ಸ್ವಾರಸ್ಯಗಳತ್ತ ನಮ್ಮ ಗಮನ ಹರಿದು ವ್ಯಾಕರಣದ, ಶಾಸ್ತ್ರದ ಸಂಗತಿಯೇ ಮರೆತು ಹೋಗುವ ಸಂಭವವೂ ಇಲ್ಲದಿಲ್ಲ!
 
ಪ್ರಶಸ್ತಿ, ಪುರಸ್ಕಾರ, ಬಿರುದು:
ಇವನಿಗೆ `ನಾಕಿಗ' ಎಂದೂ ಹೆಸರು. ಇವನು `ಕವಿಕರ್ಣಪೂರ', `ಕವಿತಾಗುಣೋದಯ' ಎಂಬ ತನ್ನ ಬಿರುದುಗಳನ್ನು ಹೊಗಳಿಕೊಂಡಿದ್ದಾನೆ.
 
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :