ದುರ್ಗಸಿಂಹ (ಕ್ರಿ.ಶ. 1030)
 
ಸ್ವ-ವಿವರ
ಕವಿ ಈಶ್ವರಾರ್ಯ ಮತ್ತು ರೇವಾಂಬಿಕೆ ದಂಪತಿಗಳ ಮಗ.
ಇವನು ಜಯಸಿಂಹ ಜಗದೇಕಮಲ್ಲನ ಅಳ್ವಿಕೆಯಲ್ಲಿ ಕಿಸುಕಾಡನಾಡಿನ ಸೈಯಡಿ ಎಂಬ ಅಗ್ರಹಾರದಲ್ಲಿ ವಾಸವಾಗಿದ್ದನು.
ತಕ್ಕಮಟ್ಟಿಗೆ ಶ್ರೀಮಂತನಾಗಿದ್ದ ಕವಿಯು ತನ್ನ ಹುಟ್ಟೂರಿನಲ್ಲಿ ಹರಿಹರ ದೇವಾಲಯವನ್ನು ಕಟ್ಟಿಸಿದ. ಇವನು ಗೌತಮಗೋತ್ರದ ಕಮ್ಮೆ ಕುಲದ ಬ್ರಾಹ್ಮಣ.
ಮಹಾಯೋಗಿಯಾಗಿದ್ದ ಶಂಕರಭಟ್ಟ ಎಂಬುವನು ಈತನ ಗುರು.
ಇವನು ಅನೇಕ ಸಂಸ್ಕೃತ ಕವಿಗಳನ್ನು ಹೊಗಳಿದ್ದಲ್ಲದೆ ಇವನಿಗಿಂತ ಮುಂಚಿನ ಹಲವಾರು ಕನ್ನಡ ಕವಿಗಳಾದ ಶ್ರೀವಿಜಯ, ಕನ್ನಮಯ್ಯ, ಅಸಗ, ಮನಸಿಜ, ಚಂದ್ರ, ಪೊನ್ನ, ಪಂಪ, ಗಜಾಂಕುಶರನ್ನು ತನ್ನ ಕೃತಿಗಳಲ್ಲಿ ಹೆಸರಿಸಿದ್ದಾನೆ.ಇದರಿಂದ ಕವಿಗಳ ಕಾಲನಿರ್ಣಯಕ್ಕೆ ಸಹಾಯಕವಾಗಿದೆ.
 
ಸಾಹಿತ್ಯಕೃತಿಗಳು :
ದುರ್ಗಸಿಂಹ ಕರ್ಣಾಟಕ ಪಂಚತಂತ್ರ ಕಾವ್ಯವು ಇಂದು ಪ್ರಸಿದ್ಧವಾಗಿರುವ ವಿಷ್ಣುಶರ್ಮನ ಪಂಚತಂತ್ರದ ಅನುವಾದವಲ್ಲ.
ಗುಣಾಢ್ಯನು ಪೈಶಾಚಿಭಾಷೆಯಲ್ಲಿ ಬರೆದ ಬೃಹತ್ಕಥೆಯನ್ನು ಆಧಾರವಾಗಿ ಇಟ್ಟುಕೊಂಡು ವಸುಭಾಗಭಟ್ಟನು ರಚಿಸಿದ ಪಂಚತಂತ್ರ ಎಂಬ ಸಂಸ್ಕೃತ ಕೃತಿಯೇ ನನ್ನ ಕಾವ್ಯಕ್ಕೆ ಆಧಾರವೆಂದು ದುರ್ಗಸಿಂಹನು ಹೇಳಿದ್ದಾನೆ.
ಪಂಚತಂತ್ರಗಳಾದ ಭೇದ, ಪರೀಕ್ಷಾ, ವಿಶ್ವಾಸ, ವಂಚನೆ ಮತ್ತು ಮಿತ್ರಕಾರ್ಯ ಇವುಗಳ ಮೇಲೆ ಕಥೆ, ಉಪಕಥೆಗಳನ್ನು ಹೆಣೆದು ರಚಿಸಿದ ಕಾಲ್ಪನಿಕ ಕೃತಿ.
ದುರ್ಗಸಿಂಹನು ಮತಪ್ರಚಾರಕ್ಕಾಗಿ ಕೃತಿ ರಚನೆಗೆ ತೊಡಗಿದವನಲ್ಲ. ಆದರೂ ಪಂಚತಂತ್ರದಲ್ಲಿ ಕೊಂಚ ಜೈನ ಧರ್ಮದ ಆವರಣದಲ್ಲಿ ಮೂಡಿ ಬಂದಿದೆ.
ಚಂಪೂ ಸಂಪ್ರದಾಯ ಶೈಲಿಯಲ್ಲಿ ಬರೆದಿದ್ದರೂ ಸಂಸ್ಕೃತ ಶಬ್ದಗಳನ್ನು ಸೂಕ್ತವಾಗಿ ಬಳಸಲಾಗಿದೆ. ಜೊತೆಗೆ ಕನ್ನಡದ ಗಾದೆಗಳನ್ನು ಬಹಳ ಹಿತವಾಗಿ ಬಳಸಿಕೊಂಡು ಕನ್ನಡದ ಗದ್ಯದ ಬೆಳವಣಿಗೆಗೆ ಸಹಾಯ ಮಾಡಿದ್ದಾನೆ.
ಪಂಚತಂತ್ರದಲ್ಲಿ ಪ್ರಾಣಿಪಕ್ಷಿ, ಜಡವಸ್ತುಗಳು ಪ್ರಧಾನ ಪಾತ್ರಗಳಾಗಿ ಮಾನವರ ರೀತಿಯಲ್ಲಿ ಮಾತನಾಡುವುದನ್ನು ಕಾಣಬಹುದು.
ಇದರಲ್ಲಿ ಚಿತ್ರಿತವಾದ ಪಾತ್ರಗಳಾದ ಪಿಂಗಳಿಕ ಎಂಬ ಸಿಂಹ, ಸಂಜೀವಕ ಎಂಬ ಎತ್ತು, ಕರಟಕ ದಮನಕರೆಂಬ ನರಿಗಳು, ಹಿರಣ್ಯರೋಮ ಎಂಬ ಇಲಿ ..ಮುಂತಾದವುಗಳು ಓದುಗರ ಮನಸ್ಸಿನಲ್ಲಿ ಅಚ್ಚೊತ್ತಿದೆ ಎಂದರೆ ಅದರಲ್ಲಿ ಅತಿಶಯೋಕ್ತಿಯೇನಿಲ್ಲ.