ನಮ್ಮೂರೇ ನಮಗೆ ಅಂದ > ಕೂಟಗಲ್ ಬೆಟ್ಟ
 
~ ಕೂಟಗಲ್ ಬೆಟ್ಟ ಅಥವಾ ಶ್ರೀ ತಿಮ್ಮಪ್ಪ ಸ್ವಾಮಿ ಬೆಟ್ಟದ ಇತಿಹಾಸ ~
 
ಈ ಕಲ್ಲನ್ನು ಓದಿದವರು ಸಾಯುತ್ತಾರೆ!, ಅಥವಾ ಅವರಿಗೆ ಮುಂದೆ ತೊಂದರೆ ಉಂಟಾಗುತ್ತದೆ ಎಂಬ ಮಾತುಗಳೇ ಬಹಳಷ್ಟು ಮಂದಿಯಿಂದ ಬಂದಂತಹ ಉತ್ತರ. ಆದರೆ ನಾನು ಈ ಶಾಸನವನ್ನು ಓದಲು ಪ್ರಯತ್ನಿಸಿದೆ. ಇದರ ಪ್ರಕಾರ ಅಶ್ವಯಾಗ ಎಂಬ ಪದವು ಕನ್ನಡದಲ್ಲಿ ದೂರೆತಿದ್ದು, ಈ ಅಶ್ವಯಾಗ ಪದ್ದತಿಯು ಉತ್ತರ ವೈದಿಕ ಕಾಲ ಸುಮಾರು ಕ್ರಿ. ಪೂ. ೧೫೦೦ ಎಂದು ತಿಳಿಯ ಬಹುದಾಗಿದೆ. ಹೀಗೆ ನಮ್ಮೂರು ಹಲವು ಐತಿಹ್ಯಗಳನ್ನು ಒಳಗೊಂಡಿರುವ ಅಧ್ಯಯನ ಶಾಲೆ, ಇದರೊಳಗೆ ಒಮ್ಮೆ ಹೊಕ್ಕು ಮನಕ್ಕೆ ಸಂತಸ ತರುವುದಂತೂ ನಿಜ.ಸುಂದರ ಪ್ರಕೃತಿಯ ನಮ್ಮೂರು ಹಲವು ವಿಸ್ಮಯಗಳ ಆಗರ .
ಕೂಟಗಲ್ ಗ್ರಾಮವು ಬೆಂಗಳೂರು ಮೈಸೂರು ರಸ್ತೆಯ ನಡುವೆ ಬೆಂಗಳೂರಿನಿಂದ ೪೯ ಕಿ.ಮೀ ದೂರದಲ್ಲಿ ರಾಮನಗರ ಪಟ್ಟಣ ಸಿಗುತ್ತದೆ, ಇಲ್ಲಿಂದ ಮಾಗಡಿ ಮಾರ್ಗವಾಗಿ ಚಲಿಸಿದರೆ ರಾಮನಗರ ತಾಲ್ಲೂಕಿನಿಂದ ೯ ಕಿ.ಮೀ ದೂರದಲ್ಲಿ ಕೂಟಗಲ್ ಗ್ರಾಮವು ಸಿಗುತ್ತದೆ.
ಗ್ರಾಮದಲ್ಲಿರುವ ಶ್ರೀ ತಿಮ್ಮಪ್ಪ ಸ್ವಾಮಿ ಬೆಟ್ಟವನ್ನು ಮೆಟ್ಟಿಲಿನಿಂದಲೂ, ಹತ್ತಬಹುದು ಅಥವ ನೇರವಾಗಿಯೇ ವಾಹನದಿಂದಾಗಿಯೂ ಹೋಗಬಹುದಾಗಿದೆ. ಬೆಟ್ಟದ ಮೇಲೆ ನಿಂತು ನೋಡಿದರೆ ಸುತ್ತ-ಮುತ್ತಲಿನ ಪರಿಸರವನ್ನು ವೀಕ್ಷಿಸಬಹುದಾಗಿದೆ.
 
ಅರಳಿ ಕಟ್ಟೆ:
ಕೂಟಗಲ್ ಗ್ರಾಮದ ಕೆ.ಆರ್.ಪಾಪಣ್ಣ (೯೮) ಮತ್ತು ಚಿಕ್ಕಪ್ಪಯ್ಯ (೮೨)ಮತ್ತು ಚಾಕಿವೆಂಕಟಯ್ಯ ಇವರುಗಳನ್ನು ಮಾತಿಗೆಳೆದಾಗ, ಅಯ್ಯೋs ನಾವ್ ಕಂಡುದ್ದೇನಿಲ್ಲ! ನಮ್ಮ್ ತಾತ ಮುತ್ತಾತ ಇವ್ರೇಲ್ಲ ಯೋಳ್ತಿದ್ರು, ಅದ್ನೆ ನೆನಪ್ ಮಾಡ್ಕೂಂಡ್ ಗೋತ್ತಿರೋದ್ನೇಳ್ತಿನಿ ಎಂದು ಕೂಟಗಲ್ ಬೆಟ್ಟದ ಗಳಗಲ್ಲು, ತೊಟ್ಲುಸೂಣೆ, ಚಕ್ರದ ಸೂಣೆ, ಕಲ್ಯಾಣಿ, ಕೋಟೆ, ತಿಮ್ಮಪ್ಪನ ಗುಡಿ,
ಬೆಟ್ಟಕ್ಕೆ ಮೆಟ್ಟಿಲು ನಿರ್ಮಾಣ, ಬೆಟ್ಟದ ಮೇಲಿನ ಶಿವಲಿಂಗ, ನೈದಿಲೆ ಕೂಳ, ಕರಡಿಗುಹೆ, ತಾಳವಾಡಿ ಬೆಟ್ಟ, ಕೋಳಿಕಲ್ಲು, ಬೆಟ್ಟಗಳ ವಿವರಗಳನ್ನು ಬಿಚ್ಚಿಟ್ಟರು. ಹಾಗೆಯೇ ಈ ಗ್ರಾಮದಲ್ಲಿ ಚೋಳರು ವಾಸವಾಗಿದ್ದರು ಎಂದು, ಚೋಳರು ಬೆಟ್ಟದ ಮೇಲೆ ಮನೆಯನ್ನು ಕಟ್ಟಿಕೂಂಡು ವಾಸವಾಗಿದ್ದರೆಂದು ಶ್ರೀಯುತ ಚಿಕ್ಕಪ್ಪಯ್ಯನವರು ತಿಳಿಸಿದರು. ಇವರ ಪ್ರಕಾರ ನಾವುಗಳು ಸಹ ಬೆಟ್ಟದ ಮೇಲೆ ಅವಶೇಷಗಳನ್ನು ಹುಡುಕಿದಾಗ ಕಲ್ಲಿನಿಂದ ಮತ್ತು ಮಣ್ಣಿನಿಂದ ನಿರ್ಮಾಣ ಗೋಂಡಿರುವ ಸಣ್ಣ ಗೋಡೆಗಳು ಸಿಕ್ಕಿದವು. ಆದರೆ ಇವುಗಳು ಚೋಳರ ಕಾಲದವೇ ಎಂಬ ಬಗ್ಗೆ ಅನುಮಾನಗಳು ನಮ್ಮನ್ನು ಕಾಡಲಾರಂಬಿಸಿವೆ.
 
ಶ್ರೀ ತಿಮ್ಮಪ್ಪ ಸ್ವಾಮಿ ದೇವಾಲಯದ ಪಕ್ಕದಲ್ಲಿರುವ ಕಾಲ್ಸೂಣೆ:
ತಿಮ್ಮಪ್ಪನ ಗುಡಿಗೆ ನೂರೈವತ್ತು ಮೀಟರ್ ದೂರದಲ್ಲಿರುವ ಕಾಲು ತೂಳೆಯುವ ಸ್ಥಳವೇ ಕಾಲ್ಸೂಣೆ. ಬೆಟ್ಟದ ಶಿರೋಭಾಗದಲ್ಲಿ ಹೆಬ್ಬಂಡೆಗೆ ಆಸರೆ, ದಕ್ಷಿಣಕ್ಕೆ ಬಾಗಿಲುಳ್ಳ ದೇವಾಲಯ, ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ನಾಲ್ಕೈದು ಅಡಿಗಳಷ್ಟು ಜಾಗವಿದ್ದು ಉಳಿದಂತೆ ವಿಶಾಲವಾದ ಬಯಲಿದೆ. ತೆಂಗು, ಕಣಗಿಲೆ, ಇತ್ಯಾದಿ ಮರಗಳು ಬೆಳೆದಿವೆ.
 
ಪಕ್ಕದ ಬೆಟ್ಟಕ್ಕೆ ಆಸರೆಯಾಗಿ ಮೂರು ಕಡೆ ಕಲ್ಲಿನಿಂದ ನಿರ್ಮಾಣ ಗೂಂಡ ಆಯಾತಾಕೃತಿಯ ಪುಷ್ಕರಣಿಯೇ ಕಣ್ವರ ಸ್ನಾನ ಘಟ್ಟ. ಪೂರ್ವದಿಕ್ಕಿಗೆ ಬೆಟ್ಟದಿಂದ ಸಂಚಾರ ಹೂರಡುತ್ತಿದ್ದ ಕಣ್ವರು ಈ ಪುಷ್ಕರಣಿಯಲ್ಲಿ ಮೀಯುತ್ತಿದ್ದರೆಂಬ ನಂಬಿಕೆ.
 
ತೂಟ್ಟಿಲು ಸೂಣೆ:
ಶ್ರೀ ತಿಮ್ಮಪ್ಪನ ದೇವಸ್ಥಾನದ ಪಶ್ಚಿಮಕ್ಕೆ ಇನ್ನೂರು ಮೀಟರ್ ದೂರದಲ್ಲಿರುವ ನಿಸರ್ಗ ನಿರ್ಮಿತವಾದ ಈ ಸೂಣೆ ಸದಾ ತುಂಬಿರುತ್ತದೆ. ಮಕ್ಕಳಿಲ್ಲದ ಹೆಣ್ಣು ಮಕ್ಕಳು ತೂಟ್ಟಿಲು ತಂದು ಪೂಜೆ ಮಾಡಿ ಹರಕೆ ಕಟ್ಟಿಕೂಂಡರೆ ಮಕ್ಕಳಾಗುತ್ತವೆಂಬ ನಂಬಿಕೆ. ಅದರಂತೆ ಮಕ್ಕಳಾದಾಗ ಸಣ್ಣ ತೂಟ್ಟಿಲು ಅರ್ಪಿಸಿ ಹರಕೆ ತೀರಿಸಿಕೂಂಡು ಹೋಗುತ್ತಾರೆ.
 
ಶಿವಲಿಂಗ:
ತಿಮ್ಮಪ್ಪನ ಗುಡಿಯ ದಕ್ಷಿಣಕ್ಕೆ ಮುನ್ನೂರು ಮೀಟರ್ ದೂರದ ವಿಶಾಲ ಹುಟ್ಟುಬಂಡೆಯಲ್ಲಿ ಒಂದಡಿ ಎತ್ತರದ ಲಿಂಗವೊಂದನ್ನು ಪಾಣಿ ಪೀಠದ ಮಧ್ಯೆ ಕೆತ್ತಲಾಗಿದ್ದು, ಬಿಸಿಲು, ಮಳೆ-ಗಾಳಿಗಳಿಗೆ ಮೈಯೋಡ್ಡಿ ನಿಂತಿದೆ. ವನವಾಸದಲ್ಲಿ ರಾಮನೊಡನಿದ್ದ ಸೀತೆ ಪೂಜೆಗೆ ಲಿಂಗವೊಂದರ ಬೇಡಿಕೆಯಿತ್ತಾಗ ರಾಮ ಬಾಣ ಪ್ರಯೋಗ ಮಾಡಿ ಈ ಲಿಂಗವನ್ನು ನಿರ್ಮಿಸಿದನೆಂದು ಗ್ರಾಮದ ಹಿರಿಯರಾದ, ನಿವೃತ್ತ ಉಪಾಧ್ಯಾಯರಾದ ಶ್ರೀಮಾನ್ ಚಿಕ್ಕಪ್ಪಯ್ಯವನರು ತಿಳಿಸಿದರು.
 
ಚಕ್ರದ ಸೂಣೆ:
ಇಳಿಜಾರಾದ ಜಾಗದಲ್ಲಿ ಬೆಟ್ಟವನ್ನೇ ಕೂರೆದು ನಿರ್ಮಿಸಿದಂತೆ ಕಾಣುತ್ತದೆ. ಸೀತೆ ಮುಟ್ಟಾದಾಗ ಸ್ನಾನಕ್ಕೆ ನೀರು ಸಿಗುವುದಿಲ್ಲ ಕೂಡಲೇ ರಾಮನಿಗೆ ತನ್ನ ಕಷ್ಟವನ್ನು ಹೇಳಿಕೊಳ್ಳುತ್ತಾಳೆ, ರಾಮ ಬಾಣ ಬಿಟ್ಟು ಕಲ್ಲಿನಲ್ಲಿ ದೋಣಿಯಾಕಾರವನ್ನೊಳಗೂಂಡಂತೆ ಕಾಣುವ ಸೂಣೆಯನ್ನು ನಿರ್ಮಿಸುತ್ತಾನೆ, ಇದೇ ಚಕ್ರದ ಸೋಣೆ. ವೀಳ್ಯದೆಲೆಯ ಮೇಲೆ ಕರ್ಪೂರ ಹಚ್ಚಿಟ್ಟರೆ, ಚಕ್ರಾಕಾರವಾಗಿ ಸುತ್ತುವ ಈ ಸೋಣೆಗೆ ಚಕ್ರತೀರ್ಥವೆಂಬ ಹೆಸರೂ ಇದೆ.
 
ನೈದಿಲೆ ಕೂಳ:
ಸ್ನಾನ ಮಾಡಿದ ಸೀತೆಯು ಪೂಜೆಗೆ ಬೇಕಾದ ಹೂಗಳಿಗಾಗಿ ರಾಮ ಬಾಣ ಹೂಡಿ ಕೂಳವೂಂದನ್ನು ನಿರ್ಮಿಸುತ್ತಾನೆ ಅಲ್ಲಿ ಅರಳಿದ ನೈದಿಲೆಗಳು ಬಹಳ ಇರುವುದರಿಂದ ಅದಕ್ಕೆ ನೈದಿಲೆ ಕೂಳವೆಂದು ಹೆಸರಾಯ್ತು.
ಕೂಳದ ತುಂಬಾ ನೈದಿಲೆ ಹೂಗಳು ಇಂದಿಗೂ ನಳನಳಿಸುತ್ತಿವೆ. ಈ ನೈದಿಲೆ ಹೂಗಳು ಈ ಬೆಟ್ಟದಲ್ಲಿ ಬಿಟ್ಟರೆ ಬೇರೆ ಯಾವ ಕಡೆಯು ಸಿಗುವುದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.
 
ಕರಡಿ ಗುಹೆ:
ತಾಲ್ಲೂಕಿನ ಎಲ್ಲಾ ಬೆಟ್ಟಗಳಲ್ಲೂ ಕರಡಿ ಗುಹೆಗಳಿರುವುದು ಸಾಮಾನ್ಯ, ಆದರೆ ಇಲ್ಲಿರುವ ಕರಡಿ ಗುಹೆ ವಿಶಿಷ್ಟವಾಗಿದೆ. ಬೆಟ್ಟದ ಮೇಲಿರುವ ಹೆಬ್ಬಂಡೆಯ ಸಂಧಿಯಲ್ಲಿ ನುಗ್ಗಿದ ಕರಡಿಗಳು ಬಹುದೂರದ ( ಸುಮಾರು ಎರಡು ಕಿ.ಮೀ) ಪ್ರವೇಶ ದ್ವಾರದಲ್ಲಿ ಹೂರ ಬರುತ್ತವೆ ಈ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕರಡಿಗಳನ್ನು ಕಾಣಬಹುದಾಗಿದೆ.
 
ಗಳಗಲ್ಲು ಅಥವ ನೀಳಗಲ್ಲು:
ಬೆಟ್ಟದ ವಾಯುವ್ಯ ಭಾಗದಲ್ಲಿ ಕೂಡುಗಲ್ಲು, ಗಳಗಲ್ಲು, ಕ್ಯಾತನ ಕಲ್ಲು, ಮಡಿವಾಳೆ-ಕಲ್ಲು ಅಥವಾ ಅಗಸನ ಕಲ್ಲೆಂದು ಕರೆಯುವ ಒಂದರ ಪಕ್ಕ ಒಂದರಂತೆ ನಿಂತ ಮೂರು ಕೂಡುಗಲ್ಲುಗಳ ಐತಿಹ್ಯ; ಮಡಿವಾಳಿಯೊಬ್ಬ ಬೆಟ್ಟವನ್ನು ಬೇರೆಡೆ ಎತ್ತಿಡುತ್ತೇನೆ, ಅದಕ್ಕೆ ಶಕ್ತಿವಂತನಾಗಬೇಕೆಂದು ಊರಿನ ಎಲ್ಲರ ಮನೆ ಕೋಳಿಗಳನ್ನು ತಿಂದು ಮುಗಿಸಿ ಸಿಂಬಿಗಳನ್ನು ಪಡೆದು ತಲೆಗೆ ಸುತ್ತಿಕೂಂಡು ಬೆಟ್ಟ ತೆಗೆದು ತಲೆಯ ಮೇಲಿಡುವಂತೆ ಜನರಿಗೆ ಹೇಳುತ್ತಾನೆ. ಕೋಪಗೊಂಡ ಜನರು ಅವನನ್ನು ಶಿಕ್ಷಿಸಲು ಮುಂದಾದಾಗ ಹೆಂಡತಿ, ಮಕ್ಕಳ ಸಹಿತ ಕಲ್ಲಾದನಂತೆ.
 
ಮತ್ತೊಂದು ಐತಿಹ್ಯ:
ಹೆಂಡತಿ ಮಗುವಿನೂಂದಿಗೆ ಬಟ್ಟೆಗಳನ್ನು ಸ್ವಚ್ಛ ಮಾಡಲು ಸರಿ ರಾತ್ರಿಯಲ್ಲಿ ಬರುವಾಗ ಕಣ್ವರು ಸ್ನಾನ ಮಾಡುತ್ತಿರುತ್ತಾರೆ. ಮಾನವರ ದ್ವನಿ ಕೇಳಿ ನೋಡಿದರೆ ಬಿನ್ನವಾಗುತ್ತೇವೆಂದು ಮಡಿವಾಳಿಗೆ ಶಾಪವಿತ್ತದ್ದರಿಂದ ಕಲ್ಲಾದರು. ಸಿಡಿಲು ಒಡೆದು ಭಾಗವಾದ ಕಲ್ಲು ಸಿಡ್ಲುಗುಂಡು, ಹೆಜ್ಜೇನುಗಳ ನೆಲೆಯ ಹೆಬ್ಬಂಡೆ ಹೆಜ್ಜೇನು ಕಲ್ಲು, ವಾಡೆ ಇತ್ಯಾದಿ ಅನೇಕ ಹೆಸರುಗಳಿಂದ ಜನರು ತಿಮ್ಮಪ್ಪನ ಬೆಟ್ಟದ ವಿವಿಧ ಭಾಗಗಳನ್ನು ಹೆಸರಿಸುತ್ತಾರೆ.
 
ತಾಲವಾಡಿ ಬೆಟ್ಟ:
ಬೆಟ್ಟವು ತೀರಾ ಕಡಿದಾಗಿದ್ದು ಶಿಥಿಲಾವಸ್ಥೆಯಲ್ಲಿರುವ ಕೋಟೆ ಆರಂಭದಲ್ಲಿಯೇ ಕಾಣಸಿಗುತ್ತದೆ. ಇನ್ನೇನುಶಿಖರವನ್ನು ಮುಟ್ಟೇಬಿಟ್ಟೆವೆನ್ನುವಾಗ ಕಡಿದಾದ ಬೆಟ್ಟದ ನೆತ್ತಿಯ ಹೆಬ್ಬಂಡೆ ಸವಾಲು ಹಾಕುತ್ತದೆ. ಉಗುರುಗಳಿಂದ ಹಿಡಿದು ಮೇಲೇರಿದಾಗ ಕಲ್ಲು ಕಂಬಗಳಿಂದ ನಿರ್ಮಿತವಾದ ಅಪೂರ್ವ ಮಂಟಪವೊಂದಿದೆ.
ಬಯಲಿನಲ್ಲಿ ಎರಡು ಅಂಕಣದ ಕಲ್ಲುಗೋಡೆ ಮತ್ತು ಕಲ್ಲು ಛಾವಣಿಯ ಮನೆ ವಿಶಿಷ್ಟವಾಗಿದೆ. ಐದೂವರೆ ಅಡಿ ಎತ್ತರ, ಎರಡೂವರೆ ಅಡಿ ಅಗಲದ ಬಾಗಿಲಿದೆ. ೧೨ ಅಡಿ ಉದ್ದ ಒಂದೂವರೆ ಅಡಿ ಅಗಲ, ಆರಂಗುಲ ದಪ್ಪದ ಆರು ಸಾಮಾನ್ಯ ಕಲ್ಲಿನ ಭೂಗೆಗಲ ಮೇಲೆ ಆರಡಿ ಉದ್ದ ಎರಡೂವರೆ ಅಡಿ ಅಗಲ ಅರ್ಧಅಡಿ ದಪ್ಪ ಕಲ್ಲು ಚಪ್ಪಡಿಗಳಿಂದ ನಿರ್ಮಿತವಾಗಿದೆ. ಕೆಂಪೇಗೌಡನ ಕುದುರೆ ಓಡಾಡಿದ ಪಾದದ ಗುರುತುಗಳು ಕೋಟೆ ಬೆಟ್ತದ ಮೇಲಿವೆ. ಶಿಖರದಲ್ಲಿ ಮಂಟಪ ಕಟ್ಟಿಸಿ ಅಂದು ದಾಳಿಗಳಿಂದ ರಕ್ಷಣೆ ಪಡೆಯುತ್ತಿದ್ದ ಕುರುಹುಗಳಿವೆ. ಕಲ್ಲು ಮಂಟಪದ ಎದುರು ಪೂರ್ವಕ್ಕೆ ಸೊಗಸಾದ ತಟಾಕವಿದೆ.
 
ಕಣ್ಣಾನದಿಯ ಅಣೆ ಕಟ್ಟು:
ಶ್ರೀ ತಿಮ್ಮಪ್ಪ ಸ್ವಾಮಿ ಬೆಟ್ಟದಿಂದ ನಿಂತು ನೋಡಿದರೆ ೨೦ ಕಿ.ಮೀ ದೂರದಲ್ಲಿರುವ ಕಣ್ಣ ಅಣೆಕಟ್ಟೆ ಕಾಣಿಸುತ್ತದೆ. ಮತ್ತು ಸುತ್ತ-ಮುತ್ತ ಬೆಟ್ಟ ಗುಡ್ಡಗಳಿಂದ ಕಂಗೂಳಿಸುವ ಪರಿಸರ ನಮ್ಮ ಕಣ್ಮನ ತಣಿಸುತ್ತದೆ.
 
ಶ್ರೀ ತಿಮ್ಮಪ್ಪ ಸ್ವಾಮಿ ದೇವಾಲಯದ ಛತ್ರ:
ದೇವಾಲಯದ ಬಳಿ ಮದುವೆ ಮತ್ತು ಇತರೆ ಶುಭ ಸಮಾರಂಭಗಳನ್ನು ಮಾಡಬೇಕಾದರೆ ಛತ್ರದ ವ್ಯವಸ್ಥೆ, ನೀರಿನ ವ್ಯವಸ್ಥೆ, ವಿದ್ಯುತ್ತಿನ ವ್ಯವಸ್ಥೆ ಸಹ ಇದ್ದು ಮಧ್ಯಮ ವರ್ಗದವರಿಗೆ ಮತ್ತು ಬಡವರಿಗೆ ಶ್ರೀ ತಿಮ್ಮಪ್ಪ ಸ್ವಾಮಿ ಛತ್ರವು ಆಸರೆಯಾಗಿ ಇದೆ.
 
ಶಾಸನ:
ಕೂಟಗಲ್ ಗ್ರಾಮದಲ್ಲಿ ಹಳೆಯದಾದ ಶಾಸನವೊಂದು ದೂರೆತಿದೆ. ಈ ಶಾಸನವು ಗ್ರಾಮದಿಂದ ೧ ಕಿ.ಮಿ ದೂರದಲ್ಲಿ ಎರೆಹಳ್ಳಿ ಮಾರ್ಗವಾಗಿ ಚಲಿಸುವ ದಾರಿಯ ಪಕ್ಕದಲ್ಲಿನ ಒಂದು ದೊಡ್ಡ ಅರಳೀಮದ ಕೆಳಗೆ ಈ ಶಾಸನವು ದೂರೆತಿದೆ. ಈ ಶಾಸನದ ಬಗ್ಗೆ ಗ್ರಾಮದಲ್ಲಿನ ಜನ-ಸಾಮಾನ್ಯರಲ್ಲಿ ವಿಚಾರಿಸಿದಾಗ, ಇದು ಶಾಸನ ಅಲ್ಲ, ಇದು ಮಸಾಣಕಲ್ಲು ಅಥವಾ ಶಾಸಣ ಕಲ್ಲು ಎಂದು ಹೇಳುತ್ತಾರೆ.
ಈ ಕಲ್ಲನ್ನು ಓದಿದವರು ಸಾಯುತ್ತಾರೆ!, ಅಥವಾ ಅವರಿಗೆ ಮುಂದೆ ತೊಂದರೆ ಉಂಟಾಗುತ್ತದೆ ಎಂಬ ಮಾತುಗಳೇ ಬಹಳಷ್ಟು ಮಂದಿಯಿಂದ ಬಂದಂತಹ ಉತ್ತರ. ಆದರೆ ನಾನು ಈ ಶಾಸನವನ್ನು ಓದಲು ಪ್ರಯತ್ನಿಸಿದೆ. ಇದರ ಪ್ರಕಾರ ಅಶ್ವಯಾಗ ಎಂಬ ಪದವು ಕನ್ನಡದಲ್ಲಿ ದೂರೆತಿದ್ದು, ಈ ಅಶ್ವಯಾಗ ಪದ್ದತಿಯು ಉತ್ತರ ವೈದಿಕ ಕಾಲ ಸುಮಾರು ಕ್ರಿ. ಪೂ. ೧೫೦೦ ಎಂದು ತಿಳಿಯ ಬಹುದಾಗಿದೆ, ಇಲ್ಲವೆ ಮರಾಠರ ಕಾಲ ಕ್ರಿ. ಶ ೩೩೬ ಎಂದು ನನ್ನ ಅಭಿಪ್ರಾಯ. ಈ ಶಾಸನವನ್ನು ನಾವುಗಳು ರಕ್ಷಿಸಿ ಇದನ್ನು ಇತಿಹಾಸ ತಜ್ಞರ ಬಳಿ ಓದಿಸಿದರೆ ಈ ಗ್ರಾಮದಲ್ಲಿ ಯಾರ ಆಳ್ವಿಕೆ ನಡೆಯಲ್ಪಟಿತ್ತು ಎಂಬ ಮಾಹಿತಿಯನ್ನು ತಿಳಿಯಬಹುದಾಗಿದೆ.
 
ಹೀಗೆ ಇನ್ನು ಹಲವಾರು ರೀತಿಯಲ್ಲಿ ಗ್ರಾಮದಲ್ಲಿನ ಸುತ್ತ-ಮುತ್ತಲಿನ ಬೆಟ್ಟಗಳನ್ನು ಅಧ್ಯಾಯನ ಮಾಡಿದರೆ ಇನ್ನು ಮಹತ್ತರವಾದ ಐತಿಹಾಸಿಕ ವಿವರಗಳು ಲಭ್ಯವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಹಾಗೆಯೇ ಶಾಲಾ-ಕಾಲೇಜು ವಿಧ್ಯಾರ್ಥಿ/ನಿಯರಿಗೆ ಚಾರಣ ಕಾರ್ಯಕ್ರಮವನ್ನು ಏರ್ಪಡಿಸಿ ಇಲ್ಲಿಗೆ ಬಂದು ಇತಿಹಾಸಗಳ ಬಗ್ಗೆ ತಿಳಿದುಕೂಳ್ಳಬಹುದು ಅಥವಾ ಅಧ್ಯಾಯನ ಮಾಡಬಹುದಾಗಿದೆ.
 
ಲೇಖಕರು-ಕೆ. ಪ್ರದೀಪ್ ಕುಮಾರ್ ಎಂ.ಎ
ವಿಳಾಸ: ಕೂಟಗಲ್, ಕೂಟಗಲ್ (ಅಂಚೆ)
ರಾಮನಗರ ತಾ|| ಬೆಂ. ಗ್ರಾಂ. ಜಿಲ್ಲೆ - ೫೭೧೫೧೧
Top
~~~~~~~~~~~~~~~~~~