ನಮ್ಮೂರ ಜಾತ್ರೆ >ರಾಜಾಜಿನಗರ ಹಬ್ಬ
 
''' ರಾಜಾಜಿನಗರ ಹಬ್ಬ'''
 
 
ಜಾನಪದ ಜಾತ್ರೆಗೆ ಪ್ರಚಾರ ನೀಡಿದ ಪರಿಯೇ ಸೊಗಸಾಗಿತ್ತು. ಹಳೇಕಾಲದ ಜಟಕಾಬಂಡಿಯಲ್ಲಿ ಧ್ವನಿವರ್ಧಕವನ್ನು ಇಟ್ಟುಕೊಂಡು ಜಾತ್ರೆಗೆ ಬನ್ನಿ, ರಾಜಾಜಿನಗರ ಹಬ್ಬಕ್ಕೆ ಬನ್ನಿ ಎಂದು ಆಹ್ವಾನಿಸುತ್ತಿದ್ದ ರೀತಿ ಹಳ್ಳಿಯವರಿಗೆ ಪರಿಚಿತವಾದರೂ ನಗರದವರಿಗೆ ಹೊಸ ಅನುಭವ.
ಜಾನಪದ ಜಾತ್ರೆ ಎಂದೇ ಬಿಂಬಿಸಲಾಗಿರುವ ರಾಜಾಜಿನಗರಹಬ್ಬಕ್ಕೆ ದಿನಾಂಕ ೧೯ ನವೆಂಬರ್ ೦೫ ರಂದು ಚಾಲನೆ ದೊರೆಯಿತು. ಬೆಂಗಳೂರಿನ ಶಿವನಗರದ ಸಣ್ಣ ಬೀದಿಗೆ ಕಾಲಿಟ್ಟಾಗ ಅಲ್ಲಿನ ಗೃಹಿಣಿಯರು ಆಗ ತಾನೇ ತಾಯಿ ಭುವನೇಶ್ವರಿಗೆ ಪೂಜೆ ಮಾಡುತ್ತಿದ್ದರು. ಕನ್ನಡಮಾತೆಗೆ ಪೂಜೆಸಲ್ಲಿಸಿದ ಮೇಲೆ ಮೈಲಾರ ಮಹಾದೇವಪ್ಪ ಕ್ರೀಡಾ ಹಾಗೂ ಯುವಜನ ಸಂಘದ ಯುವಕರು ಕನ್ನಡಾಂಬೆಯ ಮೂರ್ತಿಯನ್ನು ಒಯ್ದು ಪೀಠದ ಮೇಲೆ ಸ್ಥಾಪಿಸಿದರು. ಆಗಿನ್ನೂ ಸಮಯ ೧೦:೧೫, ಎಲ್ಲೆಡೆಯಂತೆ ಇಲ್ಲೂ ಕೂಡ ವಿಳಂಭವಾಗಬಹುದೆಂಬ ನಿರೀಕ್ಷೆಯನ್ನು ಹುಸಿಗೊಳಿಸಿದ ಆಹ್ವಾನಿತರು ಸರಿಯಾದ ಸಮಯಕ್ಕೆ ಹಾಜರಾಗಿದ್ದು ವಿಶೇಷ. ಇತ್ತ ರಾಜಾಜಿನಗರ ಪ್ರಾಂತ್ಯದ ಮನೆ ಮಗನಂತಿರುವ ಶಾಸಕರಾದ ನೆ. ಲ. ನರೇಂದ್ರಬಾಬು ತಮ್ಮ ಕಾರಿನಿಂದ ಇಳಿದರೆ, ಅತ್ತ ಜಾನಪದ ಲೋಕದ ಚುಕ್ಕಾಣಿ ಹಿಡಿದಿರುವ ಶ್ರೀ ಜಿ.ನಾರಾಯಣ ರವರು ಆಟೋರಿಕ್ಷಾದಿಂದ ಬಂದರು. ಬಂದ ಗಣ್ಯರು ಮೊದಲು ಕನ್ನಡ ದೇವಿಗೆ ನಮಿಸಿದರು. ನಂತರ ನಾಡಿನ ಮೂಲೆಮೂಲೆಗಳಿಂದ ಬಂದಿದ್ದ ಜಾನಪದ ತಂಡಗಳ ಸಿದ್ಧತೆಯ ಪರಿಶೀಲನೆಗೆ ನರೇಂದ್ರಬಾಬುರವರು ಅತ್ತ ಸಾಗಿದರು. ತಂಡಗಳ ಸಿದ್ಧತೆಯ ಪರಿಶೀಲನೆ ಮಾಡಿದ ಮೇಲೆ ವೇದಿಕೆಯನ್ನೇರಿದ ಗಣ್ಯರು, ಕಾರ್ಯಕ್ರಮದ ಉದ್ಘಾಟನೆಯ ಕಾರ್ಯವನ್ನು ಮಾಡಿದರು. ಹಚ್ಚೇವು ಕನ್ನಡದ ದೀಪ, ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಹಾಡುಗಳು ಧ್ವನಿವರ್ಧಕದಿಂದ ಹೊರಹೊಮ್ಮುತ್ತಿದ್ದವು.
 
ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಸಂಸದೆ ಶ್ರೀಮತಿ ಬಿಂಬಾ ರಾಯ್ಕರ್ ರವರು ಮಾತನಾಡುತ್ತಾ ಇಂದಿನ ಯುವ ಜನಾಂಗವು ಅನುಸರಿಸುತ್ತಿರುವ ಸಂಸ್ಕೃತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. .
ದೇಶದಾದ್ಯಂತ ಜವಳಿ ಉದ್ಯಮದ ಕಾರ್ಖನೆಗಳು ಸಾಕಷ್ಟಿದ್ದರೂ ಇಂದಿನ ಯುವತಿಯರು ತುಂಡು, ಹರಕು ಬಟ್ಟೆ ತೊಡುವುದು ಯಾಕೆ ಎಂದು ಪ್ರಶ್ನಿಸಿದರು. ರಾಜಾಜಿನಗರದ ಜನತೆ ಆಚರಿಸುತ್ತಿರುವ ಜಾನಪದ ಜಾತ್ರೆಯನ್ನು ಹೊಗಳಿದ ರಾಯ್ಕರ್ ರವರು ಇದೇ ರೀತಿ ಎಲ್ಲಾ ಜನರು ಕನ್ನಡನಾಡಿನ ಸಂಸ್ಕೃತಿಗೆ ಬೆಂಬಲ ನೀಡಿದರೆ ಚೆನ್ನ ಎಂದರು
 
ಇದಕ್ಕೂ ಮುಂಚೆ ಮಾತನಾಡಿದ ಜಾನಪದ ಲೋಕದ ಅಧ್ಯಕ್ಷರಾದ ಶ್ರೀ ಜಿ. ನಾರಯಣರವರು ಜಾನಪದ ಲೋಕಕ್ಕೆ ನಾಡೋಜ ಎಚ್.ಎಲ್.ನಾಗೇಗೌಡರು ನೀಡಿದ ಕೊಡುಗೆಯನ್ನು ಸ್ಮರಿಸಿದರು. ರಾಜಾಜಿನಗರ ಹಬ್ಬವನ್ನು ಜಾನಪದ ಶೈಲಿಯಲ್ಲಿ ಅರ್ಥಪೂರ್ಣವಾಗಿ ಆಚರಿಸುತ್ತಿರುವ ರಾಜ್ಯೋತ್ಸವ ಸಮಿತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉದ್ಘಾಟನಾ ಸಮಾರಂಭದ ಹೊಣಿಹೊತ್ತಿದ್ದ ಶ್ರೀ ನರೇಂದ್ರಬಾಬುರವರು ಬಂದಿದ್ದ ಗಣ್ಯರಿಗೆ ಸ್ವಾಗತ ಕೋರಿ ಗೌರವಾದರದಿಂದ ಸನ್ಮಾನಿಸಿದರು.
ಸಮಾರಂಭಕ್ಕೆ ಸ್ಥಳೀಯರಾದ ಶ್ರೀಕರಿಬಸಯ್ಯ, ಸಾ. ರಾ. ಗೋವಿಂದು, ಎಚ್.ವಿ.ಪ್ರಕಾಶ್. ಬೆ.ಮ.ಪಾ.ದ ಸದಸ್ಯರಾದ ಪದ್ಮಾವತಿ, ರಾಜಣ್ಣನವರು ಆಗಮಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು.
Top
 
ಮುಂದೇನಿದ್ದರು ಜಾನಪದ ತಂಡಗಳ ಸಂಭ್ರಮದ ಕುಣಿತ...
ಜಾನಪದ ಜಾತ್ರೆಗೆ ಪ್ರಚಾರ ನೀಡಿದ ಪರಿಯೇ ಸೊಗಸಾಗಿತ್ತು. ಹಳೇಕಾಲದ ಜಟಕಾಬಂಡಿಯಲ್ಲಿ ಧ್ವನಿವರ್ಧಕವನ್ನು ಇಟ್ಟುಕೊಂಡು ಜಾತ್ರೆಗೆ ಬನ್ನಿ, ರಾಜಾಜಿನಗರ ಹಬ್ಬಕ್ಕೆ ಬನ್ನಿ ಎಂದು ಆಹ್ವಾನಿಸುತ್ತಿದ್ದ ರೀತಿ ಹಳ್ಳಿಯವರಿಗೆ ಪರಿಚಿತವಾದರೂ ನಗರದವರಿಗೆ ಹೊಸ ಅನುಭವ.
ಸುಮಾರು ೪೦ ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು ವಿಶೇಷ. ಪ್ರತಿ ತಂಡದ ಬಗ್ಗೆ ಸ್ಥೂಲ ಚಿತ್ರಣ ನೀಡಲು ಪ್ರಯತ್ನಿಸುವೆ.
 
ಮೊದಲಿಗೆ ಕಂಡದ್ದು ಡೊಳ್ಳು ಕುಣಿತ , ಡೊಳ್ಳಿನ ಅಬ್ಬರದ ಸದ್ದಿಗೆ ಎದೆ ಝಲ್ ಎಂದರೂ ಡೊಳ್ಳು ಕುಣಿತ ನೋಡಲು ಆಕರ್ಷನೀಯ.ಕಂಸಾಳೆ ಆಟವಾಡುತ್ತಿದ್ದರು ಚಿಕ್ಕ ಹುಡುಗರು ಸುಂದರವಾಗಿ ಪದ ಹೇಳುತ್ತ ತಾಳಕ್ಕೆ ತಕ್ಕ ಹೆಜ್ಜೆಹಾಕುತ್ತಿದ್ದರು.
ನಂತರ ಲಂಬಾಣಿ ಜನಾಂಗದ ಮಹಿಳೆಯರು ತಮ್ಮ ಸಾಂಪ್ರದಾಯಿಕ ತೊಡುಗೆಯನ್ನು ತೊಟ್ಟು ನೃತ್ಯ ಮಾಡುತ್ತ ಹಾಡುತ್ತಿದ್ದದ್ದು ಇಂಪಾಗಿತ್ತು. ಬಣ್ಣ ಬಣ್ಣದ ಪೋಷಾಕಿನಲ್ಲಿ ಕೋಡಂಗಿ, ಡೊಳ್ಳು ಹೊಟ್ಟೆಯ ಕುಳ್ಳಣ್ಣ, ರಾಜ, ರಾಣಿಯ ವೇಷಧಾರಿಯರು ಚಿಣ್ಣರ ಗಮನ ಸೆಳೆದರು.ಕೊಲೆ ಬಸವನನ್ನು ರೇಗಿಸಿ ವೃತ್ತಾಕಾರವಾಗಿ ತಿರುಗುತ್ತಾ ಸಾಹಸ ಪ್ರದರ್ಶನ ನೀಡಿದ್ದು ಕಣ್ಮನಸೆಳೆಯಿತು. ಅಲ್ಲಿಂದ ಮುಂದೆ ನಂದಿಧ್ವಜ ವನ್ನು ಹಿಡಿದು ಕುಣಿತವನ್ನು ನೋಡಿದಾಗ ಎಲ್ಲಿ ಅದನ್ನು ಬೀಳಿಸುತ್ತಾರೊ ಎಂಬ ಭಯವಾಗುತ್ತಿತ್ತು ಆದರೆ ಅವರ ಅನುಭವದ ಕುಣಿತವನ್ನು ನೋಡಿದರೆ ನನ್ನ ಅನಿಸಿಕೆ ತಪ್ಪೆನಿಸಿತು.
 
ಕುಣಿತದ ಹಿಂದಿನ ಪರಿಶ್ರಮ ವೇದ್ಯವಾಯಿತು. ನಂತರ ಅದರ ಹಿಂದೆ ಪೂಜಾ ಕುಣಿತ ಬಂತು, ಮುಂದೆ ವೀರಾವೇಷವನ್ನು ಪ್ರದರ್ಶಿಸಿದ ಯಡಿಯೂರಿನ ವೀರಗಾಸೆ ತಂಡದವರು ಎಲ್ಲರ ಗಮನಸೆಳೆದರು.ಮುಂದೆ ೧೦-೧೫ ಜನರ ಗುಂಪು ಗುಂಪಾಗಿ ಕರಡಿ ಮಜಲಿನ ಕುಣಿತವನ್ನು ಪ್ರದರ್ಶಿಸುತ್ತ ಸಾಗಿದರು.
ನಂತರ ಕಂಡ ಹುಲಿವೇಷ ಸಾಮಾನ್ಯ ರೀತಿಯಾಗಿದಿದ್ದದ್ದು ಮಾತ್ರ ಬೇಸರ ತಂದಿತು. ಮುಂದೆ
ಈಗ ಎಲ್ಲೆಡೆ ಜನಜನಿತವಾಗಿರುವ ಜೋಗಿವೇಷಧಾರಿಗಳು, ಸಾಗರದಿಂದ ಬಂದಿದ್ದ ಕಿಂದರಜೋಗಿಗಳು ಸುಂದರವಾಗಿ ಕಂಡರು.ಜನಸಾಮಾನ್ಯರಿಗೆ ಹೆಚ್ಚು ಪರಿಚಿತವಿರುವ ನಾದಸ್ವರ ಗಾಯನದವರು ಸುಶ್ರಾವ್ಯವಾಗಿ ಸ್ವರ ಹೊರಡಿಸುತ್ತ ಸಾಗಿದರು ಮುಂದಿನದು ಚಾಮರಾಜನಗರಜಿಲ್ಲೆಯ ರಾಮಸಮುದ್ರದ ಮುದ್ದು ಮಲ್ಲೇಗೌಡರ ತಂಡದವರಿಂದ ಗೊರವನ ಕುಣಿತ ಅದರ ಜೊತೆಗೆ ಧಾರವಾಡದವರ ಜಗ್ಗಲಿಗೆ ಕುಣಿತ ಸೇರಿ ಗಮನ ಸೆಳೆಯಿತು..
 
ನಂತರ ಕಂಡಿದ್ದು ದಾಸಯ್ಯನವರ ತಂಡ ಅವರ ನಾಮ ದೀಪ ಕುಂಡ, ಜಾಗಟೆ, ಶಂಖ ಎಲ್ಲಾ ಸೇರಿ ಸೊಗಸಾಗಿ ಕಾಣಿಸುತ್ತಿದ್ದರು. ಮುಂದೆ ಬೆಂಗಳೂರಿಗರಿಗೆ ಚಿರಪರಿಚಿತವಾದ ಕರಗದ ಕುಣಿತವಿತ್ತು ಇದನ್ನು ಪ್ರದರ್ಶಿಸಿದವರು ಅನೇಕಲ್ ನ ಸಿದ್ಧನಾಯಕನಹಳ್ಳಿಯ ಚೂಡಪ್ಪ ಮತ್ತು ತಂಡದವರು. ನಂತರ ಮಾಗಡಿರಸ್ತೆಯ ಚಿಕ್ಕ ನರಸಪ್ಪ ತಂಡದ ಅನೇಕ ಮಕ್ಕಳು ಕಾಡಿನ ಮಕ್ಕಳ ವೇಷಧರಿಸಿ ಬೇಡ ಜನಾಂಗದ ನೃತ್ಯ ಮಾಡುತ್ತಾ ಸಾಗಿದರು. ಮೇಳಕ್ಕೆ ಮೆರಗು ತಂದ ಮಂಗಳೂರಿನ ಬೈಕಂಪಾಡಿಯಿಂದ ಬಂದಿದ್ದ ಕರಾವಳಿ ಯುವಕ ಮಂಡಳಿಯವರು ಭೂತದ ಕೋಲದ ಪ್ರದರ್ಶನವನ್ನು ನೀಡಿದ್ದು ಆಕರ್ಷಕವಾಗಿತ್ತು.
      
ಕೋಲಾಟದ ನೃತ್ಯ ಮಾಡುತ್ತ ಸಾಗಿದವರು ಮಾವಳ್ಳಿಯ ದೇವಿಪುರದ ಚೌಡಯ್ಯ ಮತ್ತು ತಂಡದವರು. ಸುಮಾರು ೬೦ಕ್ಕೂ ಹೆಚ್ಚು ವಯಸ್ಸಾದಂತೆ ಕಂಡ ಚೌಡಯ್ಯನವರು ತಮ್ಮ ಕುಣಿತಕ್ಕೆ ಇನ್ನೂ ಮುಪ್ಪು ಬಂದಿಲ್ಲವೆಂದು ಕುಣಿ ಕುಣಿದು ತೋರಿದರು. ನಂತರ ಯಡಿಯೂರಿನಿಂದ ಬಂದಿದ್ದ ತಂಡದವರು ಸೋಮ(ಚೋಮ)ನ ಕುಣಿತವಾಡಿದವರು. ಹಾವೇರಿಯ ಕಡೆಯಿಂದ ಬಂದಿದ್ದ ಮಂದಿ ಕಹಳೆ, ಕೊಂಬುಗಳನ್ನು ಊದುತ್ತ ಸಾಗಿದರು. ಮುಂದೆ ಸುಗ್ಗಿ ಕುಣಿತದಿಂದ ಮೋಡಿಮಾಡಿದವರು ಭಟ್ಕಳದಿಂದ ಬಂದ ತಂಡದವರು. ಇವರ ಹಿಂದೆ ಬಂದವರು ತರೀಕೆರೆಯಿಂದ ಬಂದಿದ್ದ ಚೌಡಿಕೆ ಮೇಳದವರು ತಮಟೆಯ ಭಾರಿಸುವವರ ತಂಡಗಳು ಹೆಚ್ಚಾಗಿ ಕಾಣಿಸಿದರು, ನಂತರ ಪಟ ಕುಣಿತದವರು ಕೋಲುಗಳನ್ನು ನಿಯಂತ್ರಿಸುತ್ತಿದ್ದದ್ದು ಮೋಡಿಮಾಡಿತು. ನಂತರ ನಮ್ಮ ಹಳ್ಳಿ ಯುವಕರು ಲಾಠಿ ತಿರುಗಿಸುತ್ತ ಸಾಹಸ ಪ್ರದರ್ಶನ ನೀಡಿದರು. ಮುಂದೆ ಕಂಸಾಳೆಯ ಇನ್ನೊಂದು ತಂಡದವರು ಕುಣಿಯುತ್ತ ಸಾಗಿದರು. ಗೋಕಾಕಿನಿಂದ ಬಂದಿದ್ದ ದಟ್ಟಿ ಕುಣಿತದವರು ಎಲ್ಲರ ಗಮನ ಸೆಳೆದರು. ಇವರ ಹಿಂದೆ ಕೀಲು ಕುದರೆಯಲ್ಲಿ ರಾಜ ರಾಣಿ ವೇಷಧಾರಿಯರು ಕುಣಿಯುತ್ತ ಸಾಗಿದರು.
 
ಕೊನೆಗೆ ವೀರಗಾಸೆಯ ಇನ್ನೊಂದು ತಂಡದವರು ಮೇಳಕ್ಕೆ ಮೇರಗು ತಂದರು. ಶಿವನಗರದಿಂದ ಸಾಗಿ ನವರಂಗ ಆಟದ ಮೈದಾನ ಸೇರುವಷ್ಟರಲ್ಲಿ ಸೂರ್ಯ ನೆತ್ತಿಸುಡುತ್ತಿದ್ದ. ಮೈದಾನದಲ್ಲಿ ಕೃಷ್ಣ ರಾಯಚೂರ್ ರವರು ಜಾತ್ರೆಗೆ ಹೊಂದುವಂತಹ ಸುಂದರವಾಗಿ ವೇದಿಕೆಯನ್ನು ನಿರ್ಮಿಸಿದ್ದರು.
೬ ದಿನಗಳವರೆಗೆ ನಡೆಯುವ ವಿವಿಧ ಸ್ಪರ್ಧೆಗಳಿಗೆ, ಕಾರ್ಯಕ್ರಮಗಳಿಗೆ ಈ ವೇದಿಕೆ ಸಾಕ್ಷಿಯಗಿತ್ತು. ಅಷ್ಟರಲ್ಲಿ ಹೊಟ್ಟೆ ಚುರುಗುಡಲು ಪ್ರಾರಂಭಿಸಿತು ಅಲ್ಲಿಂದ ಹೊರಡಲು ಮನಸ್ಸಾಗದಿದ್ದರೂ ಮುಂದೆ ಅಲ್ಲಿ ಜರುಗುವ ಗ್ರಾಮೀಣ ತಿಂಡಿ- ತಿನಿಸುಗಳ ಮೇಳವನ್ನು ನೆನೆದು ಅಲ್ಲಿಂದ ಹೋರಟು ಬಂದೆ...
Top
 
~~~~~~~~~~~~~~~~~~