ನಮ್ಮೂರ ಹೆಸರೇ ಅಂದ > ತಲಕಾಡು
 
~~~ ತಲಕಾಡು ~~~
 
- ಕಾವೇರಿ ನದಿ ತೀರ
- ಟಿ. ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ.
- ಟಿ. ನರಸೀಪುರದಿಂದ ೧೨ ಕಿ.ಮೀ , ಮೈಸೂರಿಂದ ೬೦ ಕಿ.ಮೀ
 
ಹಿನ್ನಲೆ:
ಕಾಶಿಕ್ಷೇತ್ರದಲ್ಲಿ ವಸಿಷ್ಟ ಋಷಿಗಳ ವಂಶಸ್ತನಾದ ಸೋಮದತ್ತನೆಂಬುವನು ಮೋಕ್ಷವನ್ನು ಅಪೇಕ್ಷಿಸಿ ತನ್ನ ಶಿಷ್ಯರೊಂದಿಗೆ ಮುಕ್ತಿಗಾಗಿ ಕಾಶಿ ವಿಶ್ವೇಶ್ವರನನ್ನು ಕುರಿತು ತಪಸ್ಸು ಮಾಡುತ್ತಿರುವಾಗ, ವಿಶ್ವೇಶ್ವರನು ಪ್ರಸನ್ನನಾಗಿ, ನಿನಗೆ,ನಿನ್ನ ಪರಿವಾರಕ್ಕೆ ಮುಕ್ತಿ ದೊರೆಯುವ ಸ್ಥಳವು ದಕ್ಷಿಣ ಗಂಗೆಯೆಂದು ಪ್ರಸಿದ್ಧವಾದ ಕಾವೇರಿಯ ತಟದಲ್ಲಿರುವ ಋಚೀಕ ಋಷಿಗಳ ಆಶ್ರಮದ ಬಳಿಯಿದೆ. ಅಲ್ಲಿ ಮೋಕ್ಷವನ್ನು ಕರುಣಿಸುವೆ ಎಂದನು.
 
ಕಾಶಿಯಿಂದ ಹೊರಟ ಸೋಮದತ್ತನು ಹಾಗು ಪರಿವಾರದವರು ವಿಂಧ್ಯಪರ್ವತದನುಗುಂಟ ಬರುವಾಗ ಕಾಡಿನ ಆನೆಗಳಿಂದ ಹತನಾದನು.
 
ಕೊನೆಗಾಲದಲ್ಲಿ ಆನೆಯನ್ನು ನೆನೆಸುತ್ತಿದ್ದರಿಂದ ಸೋಮದತ್ತನು ಹಾಗೂ ಅವನ ಶಿಷ್ಯರು ಆನೆಯ ರೂಪಧರಿಸಿದರೂ ಕೂಡ ಪೂರ್ವಜನ್ಮ ಸ್ಮರಣೆಯ ಫಲವಾಗಿ ಕಾವೇರಿಯ ತೀರಕ್ಕೆ ಬಂದು ಅಲ್ಲೇ ಇದ್ದ ಬೂರಗದ ಮರದ ಬಳಿಯ ಪೊದೆಯೊಂದಕ್ಕೆ ದಿನನಿತ್ಯ ನೀರನ್ನು ಸಮರ್ಪಿಸಿ, ತಾವರೆಯ ಹೂವನ್ನು ಮೇಲಿಟ್ಟು ಹೋಗುತ್ತಿತ್ತು.
 
ಇದನ್ನು ಕಂಡ ತಲ ಮತ್ತು ಕಾಡ ಎಂಬ ಬೇಡರು ನೋಡಿ ಕೊಡಲಿಗಳಿಂದ ಆ ಮರದ ಬುಡಕ್ಕೆ ಕೊಡಲಿ ಪೆಟ್ಟು ಕೊಟ್ಟಗ ರಕ್ತಧಾರೆಯನ್ನು ನೋಡಿ ಕುತೂಹಲಿಗಳಾಗಿ ನೋಡಲು ಮರದ ಬುಡದಲ್ಲಿ ಶಿವಲಿಂಗ ಗೋಚರಿಸಿತು. ಶಿವನ ತಲೆಗೆ ಪೆಟ್ಟು ಬಿತ್ತೆಂದು ಮೂರ್ಛೆ ಹೋದರು. ನಂತರ ನೀವು ಹೆದರಬೇಡಿ, ಈ ಮರದ ಎಲೆ ಕಾಯಿಯನ್ನು ಅರೆದು ರಕ್ತ ಬರುವ ಜಾಗಕ್ಕೆ ಲೇಪಿಸಿ, ಆಲ್ಲಿಂದ ಬರುವ ರಕ್ತವು ಹಾಲಾಗಿ ಗೋಚರಿಸುತ್ತದೆ. ಅದನ್ನು ಸೇವಿಸಿ ನಿಮಗೆ ಮುಕ್ತಿ ದೊರೆಯುತ್ತದೆ ಎಂಬ ಅಶರೀರ ವಾಣಿ ಕೇಳಿಸಿತು. ಅದರಂತೆ ಅವರಿಬ್ಬರು ಮುಕ್ತಿ ಹೊಂದಿದರು. ತಲ ಮತ್ತು ಕಾಡ ಎಂಬ ಹೆಸರೇ ಮುಂದೆ ತಲಕಾಡೆಂದು ಜನಜನಿತವಾಯಿತು.
 
ಈ ಘಟನೆಯ ನಂತರ ಸೋಮದತ್ತನು ಮತ್ತು ಅವನ ಶಿಷ್ಯರು ತಾವೂ ಸಹ ಹಾಲನ್ನು ಕುಡಿದು ಕೈವಲ್ಯವನ್ನು ಸೇರಿದರು. ಆನೆ ವಾಸವಾಗಿದ್ದ ಕಾಡಿಗೆ ಗಜಾರಣ್ಯ ಎಂಬ ಹೆಸರು ಬಂತು. ತನಗೆ ತಾನೇ ವೈದ್ಯ ಚಿಕಿತ್ಸೆ ಮಾಡಿಕೊಂಡದ್ದರಿಂದ ಸ್ವಾಮಿಗೆ ವೈದ್ಯನಾಥನೆಂಬ ಹೆಸರಾಯಿತು.
(ಸಂಗ್ರಹ- ಕನ್ನಡಕವಿಬಳಗ)
Top
 
~~~~~~~~~~~~~~~~~~