ವೈಚಾರಿಕತೆ > ಸಮಾಜ ಸೇವೆ ಅಗತ್ಯ ಏಕೆ? - ವೈಚಾರಿಕತೆ
 
... ಜ್ಞಾನ ಚಿಂತನ...
ಸಮಾಜ ಸೇವೆ ಅತ್ಯಗತ್ಯ ಏಕೆ?
 
ಪ್ರಪಂಚ ಈಗಾಗಲೆ ಆರ್ಥಿಕ ರೀತಿಯ ವಿಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಮುಂದುವರೆದಿದೆ ಹಾಗೂ ಮುಂದುವರೆಯುತ್ತಲೇ ಇದೆ. ಕಾರಣ ಮಾನವ ಪ್ರಕೃತಿದತ್ತವಾಗಿ ದೊರೆಯುವ ಎಲ್ಲಾ ವಸ್ತುಗಳನ್ನು ಉಪಯೋಗಿಸಿ ತಾನು ಸುಖ ಸಂತೋಷಗಳನ್ನು ಅನುಭವಿಸಿ ನೆಮ್ಮದಿಯಿಂದ ಇರಬೇಕೆಂದು ತನ್ನ ಎಲ್ಲಾ ಚೇತನಗಳನ್ನು ಅಳವಡಿಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ಹೆಚ್ಚು ಹೆಚ್ಚು ದುಡಿಯುತ್ತ ಅದರಲ್ಲಿ ಅಭಿವೃದ್ಧಿ ಹೊಂದುತ್ತಾ, ಇಂದಿಗೂ ಕೂಡ ತನ್ನ ಪೀಳಿಗೆಯನ್ನು ಸಹ ಇದೇ ದುಡಿಮೆಯಲ್ಲಿ ತೊಡಗಿಸಿ ಮಾನವ ಶ್ರಮಿಸುತ್ತಿದ್ದಾನೆ.
 
ಈ ದುಡಿಮೆಯಿಂದ ಹೆಚ್ಚು ಹೆಚ್ಚು ಹಣಗಳಿಸಿ, ಬೇಕಾದ್ದನ್ನು ತಿಂದು, ಉಂಡು, ತೇಗಿ ಸುಖದಿಂದ ಇದ್ದು ನೆಮ್ಮದಿ ಪಡೆಯುವುದಕೋಸ್ಕರ ನಾನು ಮುಂದು ತಾನು ಮುಂದು ಎಂದು ಒಬ್ಬರ ಮೇಲೆ ಮತ್ತೊಬ್ಬರಂತೆ ಬೀಳಾಡುತ್ತಿದ್ದು ಈ ಏಳು ಬೀಳಾಟದಿಂದ ಜೀವನದಲ್ಲಿ ಅಸಂತೋಷ, ಅಸಮಾಧಾನ ಮುಗಿಲು ಮುಟ್ಟುತ್ತಿದೆ.
 
ಜ್ಞಾನದಿಂದ ನೆಮ್ಮದಿ ಇಂದಿದ್ದ ಮಾನವ ಅಂದರೆ ನಮ್ಮ ಹಿಂದಿನವರ ವಿದ್ಯಾಭ್ಯಾಸದಲ್ಲಿ ಹರಿಭಕ್ತಿಸಾರ, ಭಗವದ್ಗೀತೆ, ಹರಿಪುರಾಣ, ರಾಮಾಯಣ, ಮಹಾಭಾರತ, ಬೈಬಲ್, ಖುರಾನ್ ಇನ್ನು ಮುಂತಾದ ಸನ್ಮಾರ್ಗದ ಕಥೆಗಳು ಗದ್ಯ ಮತ್ತು ಪದ್ಯ ರೂಪದಲ್ಲಿತ್ತು. ಮಕ್ಕಳಿಗೆ ಸುಜ್ಞಾನ, ದೈವದಲ್ಲಿ ಭಕ್ತಿ, ಆಧ್ಯಾತ್ಮಿಕ ಅರಿವು, ಸತ್ಯ-ಧರ್ಮಗಳ ತಿಳಿವು ಮೂಡಿಬರುತ್ತಿತ್ತು. ಹಿರಿಯರಲ್ಲಿ ಭಕ್ತಿ ಗೌರವ, ನಮ್ಮವರು, ತಮ್ಮವರು ಎಂಬುವ ದೊಡ್ಡ ಮನೋಭಾವ, ಕಷ್ಟ ಸುಖಗಳ ಅರಿವು, ಅತಿಥಿ ಸತ್ಕಾರಗಳಂತಹ ಜ್ಞಾನ ಮಾನವನ ಅಳಿವು ಉಳಿವುಗಳ ಜೀವಾಳವನ್ನು ಮನದಟ್ಟು ಮಾಡಿಕೊಡುತ್ತಿತ್ತು. ಈ ಜ್ಞಾನದಿಂದಾಗಿ ಮಾನವನ ದೇಹ ಮಿಗಿಲಾಗಿ ಆತ್ಮ ಸುಕ್ಕಿಲದ ಬಟ್ಟೆಯ ತೆರದಲ್ಲಿ ತಿಳಿಯಾಗಿದ್ದು, ಒಬ್ಬರು ಮತ್ತೊಬ್ಬರ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾ ದೇವರ ಬಗ್ಗೆ ಚರ್ಚಿಸುತ್ತ ಮಾನವ ದೈವಾಂಶ ಸಂಭೂತನಾಗಿ ಮಾಡುವ ಎಲ್ಲಾ ಕೆಲಸದಲ್ಲೂ ದೇವರನ್ನು ನಂಬಿ ಅದರಿಂದ ಗಳಿಸಿದ ಲಾಭವನ್ನು ದೇವರ ಪ್ರಸಾದವೆಂದು ಸೇವಿಸುತ್ತ ನಿಜಮಾನವರಾಗಿ ನೂರಾರು ವರ್ಷಗಳ ಕಾಲ ಬಾಳಿ ಬದುಕಿದ್ದ.
 
ಆಗಿನ ಮಾನವ ಜ್ಞಾನವನ್ನು ತಿಳಿದು ಮನ ಮನದಲ್ಲೂ ದೇವರಿದ್ದಾನೆಂದು ನಂಬಿದ್ದ. ಉದಾಹರಣೆಗೆ:- ಸಮುದ್ರಕ್ಕೆ ಆಕಾರವಿಲ್ಲ, ರುಚಿ ಇದೆ ಉಪ್ಪು. ಆದರೆ ಸಮುದ್ರದಲ್ಲಿ ತಯಾರಾಗುವ ಉಪ್ಪಿಗೆ ಆಕಾರವಿದೆ ಮತ್ತು ರುಚಿಯೂ ಇದೆ. ಈ ರುಚಿ (ಉಪ್ಪು)ಯನ್ನು ನಾವು ಇಲ್ಲಿ ದೇವರೆಂದು ತಿಳಿದಾಗ, ದೇವರಿಗೆ ಆಕಾರವಿಲ್ಲ (ನಿರ್ವಿಕಾರ ನಿರಾಮಯ), ದೇವರಿಂದ ಸೃಷ್ಟಿಸಲ್ಪಟ್ಟ ಜೀವರಾಶಿಗಳಿಗೆ ಆಕಾರವಿದೆ (ಇರುವೆಯಿಂದ, ಎಂಬತ್ನಾಲ್ಕು ಲಕ್ಷ ಜೀವರಾಶಿ) ಹಾಗೂ ಈ ಜೀವಿಗಳ ಹೃದಯವೆಂಬ ಚಾಲಕನ ಸ್ಠಳದಲ್ಲಿ ಸೃಷ್ಟಿಕರ್ತನಾದ ದೇವರು ಕುಳಿತು ಅವುಗಳ ವ್ಯವಹಾರಕ್ಕನುಸಾರವಾಗಿ ( ಪಾಪ-ಪುಣ್ಯ ಗಳಿಗನುಸಾರವಾಗಿ) ನಡೆಸುತ್ತಾನೆಂದು ಅರಿತು ಒಬ್ಬರು ಮತ್ತೊಬ್ಬರಿಗೆ ಆ ದೇವರಿಗೆ ನೀಡುವಷ್ಟು ಗೌರವವನ್ನು ನೀಡುತ್ತ ಸಂತೋಷ ಸಮಾಧಾನದಿಂದ ಜೀವಿಸುತ್ತಿದ್ದರು.
 
ಇವನ ಮೆಚ್ಚುಗಾರಿಕೆಗೆ ಹಾಗೂ ಅಭಿವೃದ್ಧಿಗೋಸ್ಕರ ವಿಜ್ಞಾನವನ್ನು ಕಲಿತು ಅದರಲ್ಲಿ ದುಡಿಯುತ್ತ, ಜೀವನದಲ್ಲಿ ಬರುವ ಅಸಂತೋಷ, ಅಸಮಾಧಾನಗಳನ್ನು ಹೋಗಲಾಡಿಸಲು ತನಗೆ ಬೇಕಾಗುವ ಎಲ್ಲಾ ರೀತಿಯ ವಸ್ತುಗಳನ್ನು, ಪದಾರ್ಥಗಳನ್ನು ವೈಜ್ಞಾನಿಕ ರೀತಿಯಲ್ಲಿ ತಯಾರಿಸಿಕೊಂಡು ಅವುಗಳನ್ನು ಉಪಯೋಗಿಸುತ್ತಾ ಜೀವಿಸುತ್ತಿದ್ದಾನೆ. ಈ ದುಡಿಮೆಯಿಂದ ಹಣ ಸಂಪಾದಿಸಿ, ಹಣದಿಂದ ವಸ್ತುಗಳನ್ನು, ಪದಾರ್ಥಗಳನ್ನು ಕೊಂಡು ಜೀವಿಸುವುದರಿಂದ ತನಗೆ ಸಂತೋಷ ಸಮಾಧಾನ ಸಿಗುತ್ತದೆ ಎಂದು ಅಸಂತೋಷ ಅಸಮಾಧಾನವೆಂಬ ರಾತ್ರಿ ಮತ್ತು ಸಂತೋಷ ಸಮಾಧಾನವೆಂಬ ಹಗಲುಗಳ ನಡುವೆ ಶ್ರಮಿಸುತ್ತ ವೈಜ್ಞಾನಿಕ ಮಾನವ ಶ್ರಮ ಜೀವಿಯಾಗಿದ್ದಾನೆ. ಹೀಗೆ ಶ್ರಮಿಸುವುದರಿಂದ ದೇಹದಲ್ಲಿ ಅನಾರೋಗ್ಯ ಉಂಟಾಗಿ ಆ ರೋಗಗಳಿಗೆ ವೈಜ್ಞಾನಿಕ ರೀತಿಯಲ್ಲಿ ಔಷಧಿಗಳನ್ನು ತಯಾರಿಸಿ ಅವುಗಳನ್ನು ಉಪಯೋಗಿಸುತ್ತಾ , ಒಳ್ಳೆಯ ಗಾಳಿ, ತಣ್ಣನೆಯ ತಂಪಿಗೋಸ್ಕರ ತಾನಿರುವ ಎಡೆಗಳಲ್ಲಿ ಕೃತಕ ಉದ್ಯಾನವನಗಳನ್ನು ನಿರ್ಮಿಸುತ್ತಿದ್ದಾನೆ. ತನ್ನ ಪೀಳಿಗೆಯು ಸಹ ಬೆಳೆಯುತ್ತಿದ್ದು ಆಹಾರ ಪದಾರ್ಥಗಳ ಕೊರತೆ ಉಂಟಾಗುತ್ತಿರುವ ವೈಜ್ಞಾನಿಕ ರೀತಿಯಲ್ಲಿ ಪದಾರ್ಥಗಳ ಹೆಚ್ಚಳವನ್ನು ಸಹಾ ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಾ, ಈ ವೈಜ್ಞಾನಿಕ ರೀತಿಯಿಂದ ರಾಸಾಯನಿಕ ರೀತಿಯಲ್ಲಿ ಬೆಳೆದ ಆಹಾರ ಪದಾರ್ಥಗಳಲ್ಲಿನ ಶಕ್ತಿ ಕುಂದಿ ಹೋಗುತ್ತಿದ್ದು ತನ್ನ ಹಿಂದಿನವರಿಗಿಂತ ತಾನು ಶಕ್ತಿ ಹೀನನಾಗಿ ಬೇಗ ಅಶಕ್ತನಾಗುತ್ತಿದ್ದಾನೆ.
 
ಈ ವೈಜ್ಞಾನಿಕ ರೀತಿಯ ದುಡಿಮೆಯಿಂದ ಮುಂದುವರೆಯುತ್ತಿರುವ ಮಾನವ ಅನಾರೋಗ್ಯ, ಅಶಕ್ತತೆಗಳ ಏರುಪೇರುಗಳ ನಡುವೆ ತಾನು ನೆಮ್ಮದಿ ಕಾಣಬೇಕೆಂದು ಹಗಲು ರಾತ್ರಿ ಶ್ರಮಿಸುತ್ತಿದ್ದಾನೆ. ತನ್ನ ಸುಖ ಸಂತೋಷಕ್ಕೆಂದು ತಾನು ಕಂಡ ವೈಜ್ಞಾನಿಕ ಅಭಿವೃದ್ಧಿ, ಇದರಿಂದಾಗಿ ಅರೋಗ್ಯ, ಮಾನಸಿಕ ನೆಮ್ಮದಿ ಮತ್ತು ಸುಖ ಸಂತೋಷ ಇವನ ಅಭಿವೃದ್ಧಿಗಿಂತ ೧೦೦ ರಷ್ಟು ದೂರ ಸರಿದಿದೆ. ಹೀಗಾಗಿ ಮಾನವನ ವೈಜ್ಞಾನಿಕ ಜೀವನ ಗಾಣದ ಎತ್ತಿನ ಪಾಡಾಗಿದೆ. ಉದಾಹರಣೆಗೆ:- ಗಾಣದ ಎತ್ತು ತಿರುಗಿ ತಿರುಗಿ ಸುಸ್ತಾದಾಗ ಅದರ ನೊಗೆಯ ಹತ್ತಿರಕ್ಕೆ ಒಂದಿಷ್ಟು ಹಸಿರು ಹುಲ್ಲನ್ನು ಒಂದು ಕಡ್ಡಿಗೆ ಸೇರಿಸಿ ಕಟ್ಟಿರುತ್ತಾನೆ ಆ ಹಸಿರು ಹುಲ್ಲನ್ನು ನೋಡಿದ ಎತ್ತು ತಿನ್ನಬೇಕೆಂಬ ಆಸೆಯಿಂದ ಜೋರು ಜೋರಾಗಿ ಓಡುತ್ತದೆ. ಆ ಹುಲ್ಲು ಸಿಗುವುದಿಲ್ಲ, ಗಾಣ ತಿರುಗುವುದು ಎತ್ತಿಗೆ ತಪ್ಪುವುದಿಲ್ಲ ಈ ರೀತಿಯಾಗಿ ಮಾನವ ನೆಮ್ಮದಿ, ಸುಖ ಸಂತೋಷ ಮತ್ತು ಅನಾರೋಗ್ಯಗಳ ನಡುವೆ ಸೆಣೆಸಾಡುತ್ತಿದ್ದಾನೆ.
 
ವೈಜ್ಞಾನಿಕ ಅಭಿವೃದ್ಧಿಯ ಕಾರ್ಖಾನೆಗಳು ಹೊರಹಾಕುವ ಮಲಿನ ಹೊಗೆಯಿಂದ ಮತ್ತು ವಾಹನಗಳು ಉಗುಳುವ ಗಾಳಿಯಿಂದ ಪರಿಸರ ಮಾಲಿನ್ಯಗೊಂಡು, ಈ ಮಾಲಿನ್ಯದಿಂದಾಗಿ ಮಾನವ ಅನೇಕ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾನೆ. ಹೀಗೆ ಮಾನವನ ಜೀವನ ಬೆಳೆಯುತ್ತಾ ಹೋದರೆ ಒಂದಲ್ಲಾ ಒಂದು ದಿನ ಮಾನವ ತನ್ನ ದೈಹಿಕ ಚಿಂತನೆಗಳ ಜೊತೆಗೆ ಆರೊಗ್ಯ ಚಿಂತನೆ ಸೇರಿ ಮಾನಸಿಕ ಚಿಂತನೆಗೆ ಗುರಿಯಾಗಿ ಇರುವೆ ಗಾತ್ರದ ತೊಂದರೆ ಕೂಡ ಭೂತಾಕಾರವಾಗಿ ಕಂಡು ದೇಹ ಕುಂದಿ ಹೋಗಿ ಮಾನವ ಜೀವಕೋಟಿ ನಶಿಸಿಹೋಗುವ ಕಾಲ ಬರುವುದು ಎಂದರೆ ತಪ್ಪಾಗಲಾರದು.
 
ಈ ಎಲ್ಲಾ ತೊಂದರೆಗಳಿಂದಾಗಿ ಮಾನವ ನೆಮ್ಮದಿ ಕಾಣಬೇಕೆಂದು ಸಾವಿರಾರು ಕಾನೂನು ಕಟ್ಟಲೆಗಳನ್ನು ಮಾಡುತ್ತಿದ್ದು, ಇದರಿಂದ ತನಗೆ ಮತ್ತು ದೇಶಕ್ಕೂ ಹಿತವಿಲ್ಲದಂತಾಗಿ ಮಾನವ ಅಸಮಾದಾನ, ಅಸಂತೋಷ, ಅನಾರೊಗ್ಯವೆಂಬ ಕತ್ತಲೆಯ ನಡುವೆ ಕಣ್ಣು ಮಿಟಕಿಸುತ್ತಿದ್ದಾನೆ.
 
ಈ ಮೇಲಿನ ಎಲ್ಲಾ ಕಾರಣಗಳನ್ನು ಮೀರಿ ಮಾನವನಿಗೆ ನೆಮ್ಮದಿ, ಸಂತೊಷ ಮತ್ತು ಆರೋಗ್ಯ ಬರಬೇಕು ಎಂದರೆ ಮೊದಲು ನಾವು ನಮ್ಮನ್ನು ಅರಿತುಕೊಳ್ಳಬೇಕು. ಬುದ್ಧಿಯಲ್ಲ ಇದ್ದರೂ ಶುದ್ಧವಾಗಿ ಬಾಳದಿದ್ದರೆ ಮನುಷ್ಯನಾಗಿ ಹುಟ್ಟಿ ಏನು ಬಂತು? ಎಂಬ ನಾಣ್ಣುಡಿಯಂತೆ ಮಾನವರಾದ ನಾವು ಬುದ್ಧಿ ಎಂಬ ವೈಜ್ಞಾನಿಕತೆ ನಮ್ಮಲ್ಲಿ ಬಹಳಷ್ಟಿದ್ದರೂ ಸಹ ಶುದ್ಧವೆಂಬ ಜ್ಞಾನವನ್ನು ಬಳಸಿಕೊಳ್ಳದಿದ್ದಲ್ಲಿ ಮನುಷ್ಯರಾಗಿ ಹುಟ್ಟಿ ಪ್ರಯೋಜನವಿಲ್ಲ ಎಂಬ ನಾಣ್ಣುಡಿಗಾರರ ಪ್ರಕಾರ ಮಾನವರಾದ ನಾವು ನಮ್ಮ ಹಿಂದಿನವರಂತೆ ಜ್ಞಾನವನ್ನು ಬಳಸಿಕೊಂಡು ನಿಜ ಮಾನವರಾಗಿ ಬಾಳಿ ಬದುಕಿ ಮಾನವ ಜನ್ಮಕ್ಕೆ ಮುಕ್ತಿ ಕೋರಬೇಕೆ ವಿನಹ ಮಾನವ ಜನ್ಮಕ್ಕೆ ಮುಳ್ಳಾಗಬಾರದು.
 
ಜ್ಞಾನವಿಲ್ಲದ ವೈಜ್ಞಾನಿಕತೆಯಿಂದ ಮಾನವ ಅನಾರೋಗ್ಯ. ಅಸಂತೋಷ ಮತ್ತು ಅಸಮಾದಾನಗಳೆಂಬ ಭೂತಗಳ ಕಾಟದಿಂದ ತತ್ತರಿಸುವುದಲ್ಲದೆ ಈ ಭೂತಗಳಿಗೆ ಬಲಿಯಾಗುವ ಕಾಲ ಬರುವುದೋ ಎಲ್ಲವೋ ಎಂದು ಮಾನವರಾದ ನಾವು ತಿಳಿದು ಜ್ಞಾನ ಚಿಂತನೆಯ ಬಗ್ಗೆ ಮುನ್ನುಗ್ಗಬೇಕಾಗಿದೆ.
 
ಮಾನವ ನಿಜ ಮಾನವರಾಗಿ ಬಾಳಿ ಬದುಕಬೇಕಾದರೆ ಮತ್ತು ಸಮಾಧಾನ ಸಂತೋಷ ಹಾಗೂ ನೆಮ್ಮದಿ ಕಂಡು ಮೋಕ್ಷದ ದಾರಿ ಹಿಡಿಯಬೇಕೆಂದರೆ ನಾವು ಮೊದಲು ನಮ್ಮ ಹಿಂದಿನವರಂತೆ ನಮ್ಮ ಅಳಿವು ಉಳಿವುಗಳ ಜೀವಾಳವನ್ನು ತಿಳಿದುಕೊಳ್ಳಬೇಕು ಮತ್ತು ನಮ್ಮವರಿಗೂ ಸಹ ತಿಳಿಸಬೇಕು ಹಾಗೂ ನಮ್ಮ ಸುತ್ತಮುತ್ತಲವರಿಗೂ ಸಹ ಈ ಜ್ಞಾನದ ಮನದಟ್ಟಾಗಬೇಕು. ಇದರಿಂದ ಮೊದಲು ನಾವು ಅರಿವುದಲ್ಲದೆ ನಮ್ಮವರು ಅರಿತುಕೊಳ್ಳುವುದರಿಂದ ನಾವು ನಮ್ಮವರ ಜೊತೆಯಾಗಿ ಸೇರಿ ಒಬ್ಬರೂ ಮತ್ತೊಬ್ಬರ ಸಹಾಯ -ದಿಂದ ನೆಮ್ಮದಿಯಿಂದ ಇರುವುದರಲ್ಲಿ ಸಂಶಯವಿಲ್ಲ ಎನ್ನುವುದಕ್ಕೆ ನಮ್ಮ ಹಿಂದಿನವರೇ ಸಾಕ್ಷಿ ಎಂದು ಇಲ್ಲಿ ಸ್ಮರಿಸಬಹುದಾಗಿದೆ.
 
ಶಿವಮಲ್ಲು
ಸಮಾಜಸೇವಕರು
 
..................................