ವಿಶೇಷ ಲೇಖನ >ಏಕಾಂತ-ಒಂದು ಸುಂದರ ಅನುಭೂತಿ
 
~ ಏಕಾಂತ-ಒಂದು ಸುಂದರ ಅನುಭೂತಿ ~
ಯಾತನಮಯ ಬದುಕಿನ ಹಿಂದಿನ ಪುಟಗಳನ್ನು ತಿರುವಿದಾಗ ಏಕಾಂತದಿಂದ ಮನಸ್ಸಿಗೆ ಸಿಕ್ಕ ದೊಡ್ಡ ಕೊಡುಗೆಯು ಗೋಚರಿಸುತ್ತದೆ. ಮಳೆ ಬಿದ್ದ ಮೇಲೆ ಕಾಣುವ ಸೂರ್ಯನ ಎಳೆಯ ರಶ್ಮಿಯ ಹಾಗೆ, ನೋವಿನ ನಡುವೆಯೂ ನಲಿವಿನ ಉತ್ಸಾಹ ಸಣ್ಣದಾಗಿ ವೃದ್ಧಿಸುತಿತ್ತು. ಈ ಉತ್ಸಾಹ ಹೇಗೆ ಬಂತು?! ಮೊದಲಿಗೆ ನಮ್ಮ ನೆನೆಪಿನ ಶಕ್ತಿಯಿಂದ, ನೆನಪುಗಳೇ ನಮ್ಮ ಜೀವನದ ಗತ ವೈಭವವನ್ನು ಹಿಡಿದಿಡುವುದು.
 
ಇದೀಗ ಜನವರಿ ಬಂದಿದೆ. ಮಳೆಯ ಆರ್ಭಟ ಶುರುವಾದಂತೆಯೇ ಕರಗಿಹೋಗುತ್ತದೆ. ನನ್ನ ಮನೆಯ ಮೇಜಿಗೊರಗಿ ಪ್ರಶಾಂತವಾಗಿ ಕುಳಿತಿದ್ದೆ, ದೂರದ ಹಕ್ಕಿಯು ಮನೆಯ ಮೇಲಿನ ಚಾವಣಿ ಮೇಲೆ ಬಂದು ಕುಳಿತಿದ್ದು ಕೂಡ ಸ್ಪಷ್ಟವಾಗಿ ಕೇಳುವಷ್ಟು ಮೌನ ಆವರಿಸಿತ್ತು. ಕೊರೆಯುವ ಚಳಿಯಲ್ಲಿ ಹೊರಗೆ ಜನ ಬರುವುದೇ ಕಡಿಮೆ. ಗದ್ದಲ, ಸಡಗರದ ಭೋಜನವಿಲ್ಲ, ಮನೆಯ ಸುತ್ತಲಿರುವ ಬರ್ಚ್ ಮರ (ನುಣುಪಾದ ತೊಗಟೆಯಿರುವ ಒಂದು ಜಾತಿಯ ಮರ)ದ ಮೇಲೆಲ್ಲಾ ಆವರಿಸಿರುವ ಹಿಮದ ಹೊದಿಕೆಯನ್ನು ನೋಡಲು ಕರೆಯುವವರಿಲ್ಲ. ಎಲ್ಲವೂ ಮೌನದಲ್ಲಿ ಲೀನವಾದಂತಿದೆ.
 
ನನ್ನ ಈ ಮೌನವು ಪ್ರಾರಂಭವಾಗಿ ಈಗಾಗಾಲೇ ಏಳು ಸಂವತ್ಸರಗಳೇ ಕಳೆದಿದೆ. ತರುಲತೆಗಳು ಚಿಗುರೊಡೆಯುತ್ತಿದ್ದ ಆ ದಿನ ದೂರದಲ್ಲಿ ಹರಿಯುವ ನದಿಯು ಜುಳು ಜುಳು ನಾದ ಕೇಳುತ್ತಿತ್ತು. ಅದಕ್ಕೆ ಹಿಮ್ಮೇಳದಂತೆ ಗಗನದಲ್ಲಿ ಹಾರುವ ಹಕ್ಕಿಗಳು ತಮ್ಮ ಶಬ್ದ ತರಂಗಗಳನ್ನು ಹೊರಡಿಸುತ್ತಿದ್ದವು. ನನ್ನ ಸಖ ಗಾಲ್ಫ್ ಆಟದ ಹೊಸ ಋತುವನ್ನು ಶುರು ಮಾಡುವ ಉತ್ಸಾಹದಲ್ಲಿದ್ದ. ನನ್ನನ್ನಪ್ಪಿಕೊಂಡ ರಭಸದಲ್ಲೇ ಮುಂಬಾಗಿಲು ದಾಟಿದ್ದ. ಹೊರಡುವ ಮುನ್ನ ನಮ್ಮೀ ಕೋಟೆಯನ್ನು ಭದ್ರವಾಗಿ ನೋಡಿಕೋ! ನಾನು ೩ ರ ಒಳಗೆ ಬರುವೆ ಎಂದಿದ್ದ. ಅವನು ಹಾಗೆ ಹೇಳಿ ಇನ್ನೂ ಒಂದು ತಾಸು ಕಳೆದಿರಲಿಲ್ಲ ಭರ ಸಿಡಿಲಿನಂತೆ ಸುದ್ದಿ ಬಂತು ಕೆಳಗೆ ಬಿದ್ದು ಹೃದಯಸ್ತಂಭನವಾಗಿ ಬಾರದ ಊರಿಗೆ ಹೋದ ಎಂದು, ಇನ್ನೆಂದೂ ಹಿಂದುರುಗಲಾರ ಎಂದು ಮನವರಿಕೆ ಮಾಡಿಕೊಳ್ಳಲಾರದೆ ತತ್ತರಿಸಿ ಹೋದೆ.
 
ನನ್ನ ಈ ಅನುಭವ ಅಸಮಾನ್ಯವಾದುದೇ; ಖಂಡಿತಾ ಇಲ್ಲ ಆಸರೆಯಿಲ್ಲದ ವಿಧವೆ, ವಿಧುರರು ಬಹಳಷ್ಟು ಇದ್ದಾರೆ. ಆಪ್ತರ ಮರಣವೊಂದೇ ಒಬ್ಬಂಟಿತನದ ಸಾಮ್ರಾಜ್ಯಕ್ಕೆ ದಾರಿಯಾಗಿರಲಾರದು. ಧೀರ್ಘಕಾಲದ ಪಯಣ ಮುಂದುವರಿದಂತೆ ಒಂದಿಲ್ಲೊಂದು ಸಂದರ್ಭದಲ್ಲಿ ನಾವು ಏಕಾಂತವನ್ನು ನಮ್ಮ ಜೀವಿತಾವಧಿಯಲ್ಲಿ ಕಾಣುತ್ತೇವೆ.
 
ಏಕಾಂತದಲ್ಲಿರುವಾಗ ಕೆಲವೊಮ್ಮೆ ಎಲ್ಲವೂ ನಿರ್ಜೀವವಾಗಿ ಕಾಣತೊಡಗುತ್ತದೆ. ಬೇರೆಯವರ ಆಸರೆ, ಸಂಗಾತಿಯ ಸಖ್ಯ, ಕುಟುಂಬದಲ್ಲಿನ ಸುಖ ಸಂತೋಷದ ಅನುಭವವು ಕಾಡಿಸುತ್ತದೆ.
Top
ಹೆಚ್ಚಿದ ತಿಳುವಳಿಕೆ:
ಆದರೆ ಏಕಾಂತವು ಕೂಡ ಪೂರ್ಣ ತೃಪ್ತಿ, ಸಂತಸ ನೀಡುವ ಜೀವನವಾಗಬಲ್ಲುದು. ಬಯಸದೆ ಬರುವ ಇಂತಹ ಏಕಾಂತವು ನಮ್ಮಂತಹವರಿಗೆ ಜೀವನದಲ್ಲಿ ಸಂತಸವ ಹುಡುಕುವಂತೆ ಮಾಡುತ್ತದೆ. ಇದರಿಂದ ನಾವು ಗೌರವಯುತವಾಗಿ ಒಂಟಿಯಾಗಿ ಬಾಳಲು ಕಲಿಸುತ್ತದೆ.
 
ಯಾತನಮಯ ಬದುಕಿನ ಹಿಂದಿನ ಪುಟಗಳನ್ನು ತಿರುವಿದಾಗ ಏಕಾಂತದಿಂದ ಮನಸ್ಸಿಗೆ ಸಿಕ್ಕ ದೊಡ್ಡ ಕೊಡುಗೆಯು ಗೋಚರಿಸುತ್ತದೆ. ಮಳೆ ಬಿದ್ದ ಮೇಲೆ ಕಾಣುವ ಸೂರ್ಯನ ಎಳೆಯ ರಶ್ಮಿಯ ಹಾಗೆ, ನೋವಿನ ನಡುವೆಯೂ ನಲಿವಿನ ಉತ್ಸಾಹ ಸಣ್ಣದಾಗಿ ವೃದ್ಧಿಸುತಿತ್ತು. ಈ ಉತ್ಸಾಹ ಹೇಗೆ ಬಂತು?! ಮೊದಲಿಗೆ ನಮ್ಮ ನೆನೆಪಿನ ಶಕ್ತಿಯಿಂದ, ನೆನಪುಗಳೇ ನಮ್ಮ ಜೀವನದ ಗತ ವೈಭವವನ್ನು ಹಿಡಿದಿಡುವುದು.
 
ಹೌದು ಏಕಾಂತದಿಂದ ನೆನಪು ವೃದ್ಧಿಸುತ್ತದೆ. ಕೌತುಕದ ವಿಷಯವೆಂದರೆ ನೆನಪುಗಳು ಗತಕಾಲದ ಸುಂದರ ನೆನಪುಗಳನ್ನು ಕೆದಕುತ್ತಾ ಇಂದಿನ ಬದುಕಿನೊಡನೆ ಸಮೀಕರಿಸುತ್ತಾ, ಹೊಸ ಬಗೆಯ ಅರ್ಥವನ್ನು ನೀಡುತ್ತದೆ.
 
ಏಕಾಂತದಿಂದ ನೆನಪಿನ ಬೆಚ್ಚಗಿನ ಅನುಭವವಾಗುತ್ತದೆ. ಜೊತೆಗೆ ನಿಮ್ಮನ್ನು ನೀವು ಆತ್ಮ ವಿಮರ್ಶೆ ಮಾಡಿಕೊಳ್ಳಲು ಸಹಾಯ ಮಾಡುತ್ತಾ ಹೊಸ ವ್ಯಕ್ತಿತ್ವದತ್ತ ದಾಪುಗಾಡಿಲು ನೆರವಾಗುತ್ತದೆ. ಕೆಲ ವಾರಗಳ ಕಾಲ ನಾನು ಕಂಡಂತೆ ನನ್ನ ಮನದಾಳದಲ್ಲಿ ಮೂಡುತ್ತಿದ್ದ, ಸ್ವಗತಲಹರಿಯೋ ಎಂಬಂತೆ ನನ್ನೊಳಗಿನ ನಾನು ನನ್ನ ಮನಸಾಕ್ಷಿಯೊಡನೆ ಪುಟಿದೇಳುತ್ತಿದ್ದ ಅಸಂಖ್ಯ ಪ್ರಶ್ನೆಗಳೊಂದಿಗೆ ಸಂಭಾಷಣೆಗೆ ನಿಂತಂತ್ತಿತ್ತು. ಅದರಲ್ಲಿ ಒಂದು ಆತ್ಮ ಸಾವನ್ನು ಬಯಸಿದರೆ, ಇನ್ನೊಂದು ಜೀವಿತ, ಒಂದು ಭರವಸೆಯ ಆಸರೆ ಪಡೆದರೆ ಇನ್ನೊಂದು ತಿರಸ್ಕಾರದ ಕಡೆಗೆ, ಒಂದು ಪ್ರೇಮ ಪಥವಾದರೆ, ಇನ್ನೊಂದು ಪ್ರೇಮದ ನಿರಾಕರಣೆ.
 
ನನಗೇನೊ ನನ್ನ ಮನಸ್ಸು, ಆತ್ಮ ಯಾ ಹೃದಯ ಯಾವಾಗಲೂ ಮರುಕ ಮತ್ತು ಕ್ರೂರತೆ, ಪ್ರಬುದ್ಧ ಮತ್ತು ಎಳಸು, ಜ್ಞಾತ, ಅಜ್ಞಾತ, ಈ ರೀತಿ ಎರಡು ವಿರುದ್ಧ ದಿಕ್ಕಿನ ಕವಲುಗಳ ಮೇಲೆ ಆಧಾರವಾಗಿರುತ್ತದೆನಿಸುತ್ತದೆ. ಅಲ್ಲದೇ ಈ ವೈರುದ್ಧ್ಯಗಳ ನಡುವಿನ ಪರಸ್ಪರ ಮತುಕತೆ ನಮಗೆ ಕೇಳಿಸಲು ಕಾಯುತ್ತಿರುವಂತೆನಿಸುತ್ತದೆ.
 
ಈ ಸಂಕಷ್ಟಗಳ ನಡುವೆ ಸಿಲುಕಿಯು ನನಗೆ ವಿವರಿಸಲಾಗದಂತಹ ಭಾವನೆಗಳು ಹಾಗೂ ಮುಖ್ಯವಾದ ಕೆಲ ಪ್ರಶ್ನೆಗಳಿಗೆ ಉತ್ತರಿಸುವ ಹಿಡಿತವಿತ್ತು. ನಾನು ಏಕೆ ಈ ರೀತಿ ಮಾಡಿದೆ, ಏಕೆ ಆ ರೀತಿ ಮಾಡಲಿಲ್ಲ, ನನ್ನ ಜೀವನದ ಮುಂದಿನ ಗುರಿಯೇನು?..ಇತ್ಯಾದಿ. ಎಲ್ಲರೊಡನೆ ಬೆರೆತಿರುವಾಗ ಸುಪ್ತವಾಗಿ ಮನದಾಳದಲ್ಲಿ ಹರಿಯುವ ಪ್ರಶ್ನೆಗಳು ಏಕಾಂತದಲ್ಲಿದ್ದಾಗ ದೊಡ್ದದಾಗಿ ಕಾಣತೊಡಗುತ್ತದೆ.
Top
ಆಧ್ಯಾತ್ಮದ ಉನ್ನತಿ:
ಏಕಾಂತವು ವ್ಯಕ್ತಿತ್ವ ವಿಕಸನಕ್ಕೆ ನಾಂದಿ ಹಾಡುತ್ತದೆ. ಅದರಿಂದ ನಮ್ಮನ್ನಾವರಿಸಿದ ಭಯದಿಂದ ಹೊರಬರುವ ಬಗೆಯನ್ನು ತಿಳಿಸಿಕೊಡುತ್ತದೆ. ಏಕಾಂತವು ಮೊದಮೊದಲು ಆವರಿಸಿದಾಗ ನನಗೆ ಈ ರೀತಿಯ ಭಯಗಳು ಎಷ್ಟಿತ್ತೋ!! ಕಾರಿನಲ್ಲಿ ಒಂಟಿಯಾಗಿ ಹೋಗಲು ಭಯ, ಕತ್ತಲಿನ ಭಯ, ಪ್ರೀತಿಯಿಂದ ಪರಿತ್ಯಕ್ತಳಾಗಿ ಮತ್ತೆ ಪ್ರೀತಿಸಲಾದಂತಹ ಭಯ.
 
ಉನ್ನತಿಯನ್ನು ಸಾಧಿಸಬೇಕಾದರೆ ಏಕಾಂತದಲ್ಲಿ ಪ್ರತಿದಿನ ಹೊಸ ಹೊಸ ವಿಷಯದೊಡನೆ ಸಂಘರ್ಷ ಮಾಡುತ್ತಲೇ ಇರಬೇಕು. ಏಕಾಂತವು ನಿಮಗೆ ಕೆಲವು ದಿನಗಳಲ್ಲೇ ನೀವು ಎಂತಹವರು, ನಿಮ್ಮ ಬೆಲೆಯೇನು ಎಂಬುದನ್ನು ವಿಷದಪಡಿಸುತ್ತದೆ. ಜರ್ಮನ್ ಕವಿ ರೈನರ್ ಮರಿಯಾ ರಿಲ್ಕೆಯವರು "ಏಕಾಂತವು ಎಲ್ಲಾ ಸ್ಥಳಗಳ, ಜೀವನದ ಎಲ್ಲಾ ಸ್ತರಗಳ ಪರಿಚಯ ಮಾಡಿಸುತ್ತದೆ" ಎಂದಿದ್ದಾರೆ.
 
ಏಕಾಂತವು ಆತ್ಮಚಿಂತನೆಗೆ ಒಳಪಡಿಸುತ್ತಾ ಆತ್ಮೋದ್ಧಾರದ ಕೆಲಸ ಮಾಡಿಸುತ್ತದೆ. ನಿಜ, ಬಹಳ ವರ್ಷಗಳಿಂದ ಒಬ್ಬಂಟಿಗರಾದವರ ಏಕಾಂತತೆಯ ಗರ್ಭದಲ್ಲಿ ನಾಸ್ತಿಕತೆಯ ನೆರಳು ಅಗಾಧವಾಗಿ ಕಾಣಸಿಕ್ಕರೂ, ಏಕಾಂತದ ಗುಣಲಕ್ಷಣವು ಆತ್ಮಶಕ್ತಿಯನ್ನು ಬಲಪಡಿಸುವತ್ತ ಚಿಂತನೆ ನಡೆಸುತ್ತಿರುತ್ತದೆ. ಈ ರೀತಿಯ ಚಿಂತನೆಯಲ್ಲೇ ಮುಳುಗಿದಾಗ ಏಕಾಂತದಲ್ಲಿರುವವರಿಗೆ ಆಗುವ ಜ್ಞಾನೋದಯವೇ ನಾವು ಯಾವುದನ್ನು ಸದಾ ಹುಡುಕುತ್ತಿರುತ್ತೇವೊ, ಎಲ್ಲರೊಳಗಿನ ಪರಮಶಕ್ತಿಯೆಂದು ಯಾವುದನ್ನು ಕರೆಯುತ್ತೇವೊ ಅದರ ದರ್ಶನವಾಗುತ್ತದೆಂಬುದು ಕೆಲವರ ವಾದ.
 
ಇದರಲ್ಲಿನ ವಿರೋಧಭಾಸವೆನೆಂದರೆ ನೀವು ಕೇಳಬಹುದು ಏಕಾಂತದಿಂದ ಸಹಜ ಬಾಂಧವ್ಯಕ್ಕೆ ತೊಂದರೆಯಲ್ಲವೇ? ಎಂದು. ಇದಕ್ಕೆ ವಿರುದ್ಧ ಮತವಾಗಿ ಹೇಳವುದೆಂದರೆ ಏಕಾಂತ ಮಾನವಸಂಬಂಧಗಳಿಗೆ ಸರಿಯಾಗಿ ಹೊಂದಿಕೊಳ್ಳುವಂತಹುದು. ಕಾರ್ಲ್ ಜನ್ ಹೇಳುವಂತೆ ಇದು ಬಾಂಧವ್ಯಕ್ಕೆ ಕೇಡು ತರುವಂತಹದಲ್ಲ, ಒಬ್ಬಂಟಿಗನಾದವನು ಬಾಂಧವ್ಯದ ವಿಷಯದಲ್ಲಿ ಇತರರಿಗಿಂತ ಸೂಕ್ಷ್ಮ ಮನಸ್ಸಿನ ಸ್ಪಂದನವನ್ನು ಹೊಂದಿರುತ್ತಾನೆ.
 
ನಾವು ಖಾಲಿಯಿರುವುದರಿಂದ ಮುಕ್ತರಾಗಿರುತ್ತೇವೆ, ತೆರದ ಮನಸ್ಸಿನಿಂದ ಹೃದಯ ಬಾಗಿಲ ಬಳಿಗೆ ಬರುವ ಅನಾಮಿಕರಿಗೆ ಮುಕ್ತ ಸ್ವಾಗತ ಕೋರುತ್ತ. . .
Top
ಭಾವನಾತ್ಮಕ ಅನುಭವ
ಏಕಾಂತದಲ್ಲಿರುವಾಗ ಮನಸ್ಸು ಇತರರ ನೋವು, ಕಷ್ಟಕಾರ್ಪಣ್ಯಗಳನ್ನು ನಮ್ಮ ನೋವಿನೊಡನೆ ಹೋಲಿಕೆ ನಡೆಸುತ್ತದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ನಾನು ಇತರರೊಂದಿಗೆ ಆಳವಾಗಿ ಚರ್ಚಿಸುತ್ತೇನೆ. ಬಹುಶ: ಈಗ ನಾನು ಮುಕ್ತವಾಗಿ, ನಂಬಿಕೆಯಿಂದ ಮಾತನಾಡಲು ಸಾಧ್ಯವಾಗಿದೆ. ವರ್ಷದ ಕೆಳಗೆ ಮನಶಾಸ್ತ್ರಜ್ಞ ಹೇಳಿದ ಹಾಗೆ "ಹೆಚ್ಚು ಆಳಕ್ಕೆ ಹೋದಂತೆ ಹೆಚ್ಚು ಹತ್ತಿರವಾಗುತ್ತೀರಿ"
 
ಪ್ರಬುದ್ಧತೆಯ ಎಡೆಗೆ ಸಾಗುವಾಗ ಏಕಾಂತವು ಅವಿಭಾಜ್ಯ ಅಂಗವಾಗಿ ಸೇರ್ಪಡೆಯಾಗಿರುತ್ತದೆ. ಏಕಾಂತದ ಸದ್ಬಳಕೆಯು ಮುಂದೆ ವ್ಯಕ್ತಿಯ ವ್ಯಕ್ತಿತ್ವವನ್ನು ಹೊರಸೂಸುತ್ತದೆ. ಅನುಭವದ ಸ್ವ ಪ್ರಭೆಯಂತೆ ಗೋಚರಿಸುತ್ತದೆ. ಆದರೆ ಇದು ಪ್ರಶಾಂತತೆಯಲ್ಲ ಭಾವನೆಗಳ ಅಲೆಯಲ್ಲಿ ಮುಳುಗಿ ಕಂಪನಯುಕ್ತವಾದ ಏಕಾಂತ. ನನಗನಿಸಿದಂತೆ ಏಕಾಂತವು ನಿಮ್ಮನ್ನು ಆವರಿಸಿದಾಗ ನೀವು ಕಂಡದ್ದಕ್ಕಿಂತ ಭಿನ್ನವಾಗಿರುತ್ತದೆ. ನೀವು ವ್ಯಾಘ್ರರಾಗಬಹುದು ಯಾ ಮೃದುವಾಗಬಹುದು, ನಿಷ್ಠುರರಾಗಬಹುದು ಯಾ ದಯಾಳುವಾಗಬಹುದು, ನೀವು ದ್ವೇಷ ಸ್ವಭಾವದವರಾಗಬಹುದು ಯಾ ಪ್ರೀತಿಯ ವ್ಯಕ್ತಿಯಾಗಬಹುದು, ಅಂತರ್ಮುಖಿಯಾಗಬಹುದು ಯಾ ವಾಚಾಳಿಯಾಗಬಹುದು ಒಟ್ಟಿನಲ್ಲಿ ಮೊದಲಿದ್ದಂತೆ ಖಂಡಿತಾ ಇರುವುದಿಲ್ಲ.
 
ಎಲ್ಲಾ ಪ್ರಮುಖ ಅರಿವಿನ ಅನುಭವದಂತೆ ಏಕಾಂತವು ಸಂಪೂರ್ಣ ಯಾತನಮಯವಾದುದು. ಜೀವನದ ಯಾವ ಘಟ್ಟವು ಸುಲಭವಾಗಿ ಕಠೋರತೆಯ ಎಡೆಗೆ ಸಾಗುವುದಿಲ್ಲ, ತಂತ್ರ ಮತ್ತು ಧೈರ್ಯದಿಂದ ಅದರ ಸಾಗುವಿಕೆಯನ್ನು ತಡೆಯಬೇಕು.
 
ನಿಮ್ಮ ಬಗ್ಗೆ ನಿಮಗೆ ಕ್ಷಮಾ ಭಾವನೆ ಬರದಿರಲಿ; ಒಬ್ಬಂಟಿಗರಾಗಿ ಜೀವಿಸುವ ನಮೆಲ್ಲರಿಗೂ ಇರುವ ಕಷ್ಟವೇನೆಂದರೆ ನಮ್ಮ ಭಾವನೆಗಳೇ ನಮ್ಮ ಜೀವನದ ಮುಖ್ಯ ವಿಷಯವಾಗುತ್ತದೆ. ಬೇರೆಯವರ ಕನಿಕರವು ನಮಗೆ ಕಠೋರತೆಯ ಹಾದಿಯನ್ನು ತುಳಿಯುವಂತೆ ಮಾಡುತ್ತದೆ. ಬದಲಿಗೆ ಅವರಿಗೆ ಸರಿಯುತ್ತರ ನೀಡುವುದಿಲ್ಲ. ಗತಕಾಲವನ್ನು ವೈಭವೀಕರಿಸುವುದಕ್ಕಿಂತ ಈಗಿನ ಜೀವನಕ್ಕೆ ಪ್ರಾಮುಖ್ಯ ನೀಡುವುದನ್ನೇ ಮರೆಯುತ್ತೇವೆ.
Top
ಏಕಾಂತದಲ್ಲಿ ಸಂತೋಷದ ಕ್ಷಣಗಳ ಹುಡುಕಾಟ
ಒಬ್ಬಂಟಿಗರಾಗಿ ಜೀವಿಸುವವರು ನನಗೆ ಯಾವುದು ಸರಿ ಹೊಂದುತ್ತಿಲ್ಲ, ನನ್ನ ಸಮಯವೇ ಸರಿಯಿಲ್ಲ ಎಂದು ಹೇಳುವುದನ್ನು ಕೇಳಿದ್ದೇನೆ. ದಿನಚರಿ ಉಪಯೋಗಿಸುವುದು ಉತ್ತಮ ಅಭ್ಯಾಸ . ದಿನಚರಿಯ ಪತ್ರಿಕೆಯನ್ನು ಉಪಯೋಗಿಸಿ ದಿನನಿತ್ಯ ಕಾಣುಬರುವ ಸಂತಸದ ಕ್ಷಣಗಳನ್ನು ದಾಖಲಿಸುತ್ತಾ ಹೋದಂತೆ, ಹಾಗೂ ಪುನ: ಪುನ: ಆ ಪುಟಗಳನ್ನು ತಿರುವಿದಾಗ ನನಗರಿವಿಲ್ಲದಂತೆ ನನ್ನ ಜೀವನ ಎಷ್ಟು ಸುಂದರ ಹಾಗೂ ಅಷ್ಟೇ ನಿಗೂಢವೆಂಬುದು ಅರಿವಿಗೆ ಬರುತ್ತದೆ.
 
ಏಕಾಂತವನ್ನು ನಿಮ್ಮ ಜೀವನದ ಅಂಗವಾಗಿಸಿಕೊಳ್ಳಿ
ಒಂಟಿ ಜೀವನ ನಡೆಸುವ ಎಷ್ಟೋ ಜನರ ನೆಮ್ಮದಿಯಿಲ್ಲದ ಬದುಕಿಗೆ ಕಾರಣ ಅವರು ತಮ್ಮ ಏಕಾಂತ ಜೀವನದ ಮಹತ್ವವನ್ನು ಅರಿಯದೇ ಇರುವುದೇ ಆಗಿದೆ. ನಮ್ಮ ಜೀವನವು ಋತುಗಳ ಹಾಗೆ, ವಾತಾವರಣ ಹೇಗೆ ಬದಲಾಗುತ್ತದೆಯೋ ಹಾಗೆ, ಮೋಡದ ಮರೆಯಲ್ಲಿ ಕಣ್ಣಮುಚ್ಚಾಲೆಯಾಡುವ ಸೂರ್ಯನೋಪರಿಯಲಿ ಒಮ್ಮೆ ಸಂತಸ, ಒಮ್ಮೆ ನೋವು, ಒಮ್ಮೆ ಬಿಸಿಲು, ಒಮ್ಮೆ ನೆರಳು, ಒಮ್ಮೆ ವಸಂತ, ಒಮ್ಮೆ ಶುಷ್ಕತೆ, ಏಕಾಂತವು ವಿರಾಮದ ಅನುಭವವಲ್ಲ ಅದು ಸರಪಳಿಯ ಕೊಂಡಿಯಂತೆ ಕಾಲ ಕಳೆದಂತೆ ನಮಗೆ ನಮ್ಮ ಹಿಂದಿನ ಹಾಗೂ ಇಂದಿನ ಬದುಕಿನ ತಳಹದಿಯ ಮೇಲೆ ಮುಂದಿನ ಗುರಿಯನ್ನು ತೋರುತ್ತದೆ.
 
ನಿಮಗೆ ಜೀವಿಸಲು ಬೇಕಾದ ಮಾನಸಿಕ ದೃಢತೆ ಸಿಗುವುದು ನಿಮ್ಮಿಂದಲೇ ಅದಕ್ಕಾಗಿ ಪ್ರಾರ್ಥಿಸಿ, ಧ್ಯಾನಿಸಿರಿ. ನಿಮಗೆ ನಿಮ್ಮೊಳಗಿನ ಆತ್ಮದ ಶಕ್ತಿಯ ಅರಿವಾಗುತ್ತದೆ. ಇಷ್ಟು ದಿನ ನಿಮಗರಿವಿಲ್ಲದ ನಿಮ್ಮೊಳಗಿನ ಚೈತನ್ಯವು ಜಾಗೃತವಾಗುವುದನ್ನು ಕಾಣುತ್ತೀರಿ.
Top
ಜೀವನವನ್ನು ಪ್ರೀತಿಸಿ, ಗೌರವಿಸಿ, ಆನಂದಿಸಿ:
ಒಂಟಿತನಕ್ಕಾಗಿ ಮರುಕಪಡಬೇಡಿ. ನಿಮ್ಮನ್ನು ನೀವೇ ದಂಡಿಸಿಕೊಳ್ಳದೇ ನನ್ನಲ್ಲಿರುವ ನೋವು ಇತರರ ಜೊತೆಗಿನ ನಲಿವಿನಿಂದ ದೂರಾಗುತ್ತದೆ ಎಂಬ ಅಭಿಲಾಷೆಯಿಂದ ಸಣ್ಣ ಸಣ್ಣ ವಿಷಯಗಳಲ್ಲಿ ನಾವು ತೋರುವ ಶ್ರದ್ಧೆ, ಪ್ರೀತಿಯೇ ನಮಗೆ ಮುಂದಿನ ಸಂತಸಕ್ಕೆ ನಾಂದಿಯಾಗುತ್ತದೆ.
 
ಏಕಾಂತವನ್ನು ಶಾಶ್ವತವಾಗಿ ಆರಿಸಿಕೊಳ್ಳುವವರು ಕೆಲ ಜನರಿರುತ್ತಾರೆ. ಆದರೆ ನಾನು ಏಕಾಂತವನ್ನು ಜೀವನದ ಒಂದು ಭಾಗವಾಗಿ ಮಾತ್ರ ಸ್ವೀಕರಿಸುತ್ತೇನೆ. ಏಕೆಂದರೆ ಜೀವನದ ಪೂರ್ಣತೆಯನ್ನು ತಿಳಿಯಬೇಕಾದರೆ ಏಕಾಂತದ ಅನುಭವ ಖಂಡಿತಾ ಬೇಕಾಗುತ್ತದೆ.
 
ನೆನಪಿಡಿ ಜನರಿಂದ ತುಂಬಿದ ಮನೆಯಲ್ಲಿದ್ದರೂ ಕೂಡ ನಾವೆಲ್ಲರೂ ಏಕಾಂಗಿಗಳೇ. ಎಲ್ಲರೂ ಹುಟ್ಟಿನಿಂದ ಒಂಟಿಯೇ, ಜೀವನದ ಬೆಲೆಯನ್ನು, ಅರ್ಥವನ್ನು ಒಂಟಿಯಾಗಿಯೇ ಅರಿಯುತ್ತೇವೆ, ಕೊನೆಗೆ ಸಾವಿನ ಮನೆಯನ್ನು ಒಂಟಿಯಾಗಿಯೇ ಸೇರುತ್ತೇವೆ. ಆದರೂ ನಾವು ಧೈರ್ಯವಾಗಿ, ಸಂತಸವಾಗಿ, ನೋವು ನಲಿವಿನ ನಡುವೆ ಬದುಕನ್ನು ಹಸನಾಗಿಸಿಕೊಳ್ಳುವುದು ಹೇಗೆ ಎಂಬುದನ್ನು ಕಲಿತು ಅದರಂತೆ ನಡೆದರೆ ಅದೇ ಸಾರ್ಥಕ.
ಆಂಗ್ಲಮೂಲ : ಆರ್ಡೀಸ್ ವ್ಹೀಟ್ ಮ್ಯಾನ್
ಅನುವಾದ-ಮಲೆನಾಡಿಗ
Top
 
~~~~~~~~~~~~~~~~~~